ರಸ್ತೆ ಬದಿಯಲ್ಲಿ ಮುದುರಿ
ಮಲಗಿರುವ ಮುದುಕನಿಗೆಷ್ಟು ಪ್ರಾಯ?
ಅರಿತವರ್ಯಾರು? ಅರಿತರೂ
ಹೇಳುವವರ್ಯಾರಿದ್ದಾರೆ ಹೇಳಿ?
ಹಿಂದಿಲ್ಲ, ಮುಂದಿಲ್ಲ
ಕೇಳುವವರಾರಿಲ್ಲ ಅವನ ವ್ಯಥೆ
ಒಮ್ಮೊಮ್ಮೆ ಗೊಣಗುತ್ತಾನೆ ತನ್ನಷ್ಟಕ್ಕೆ
ಅದ್ಯಾವ ಕಥೆಯೋ ಆತನದ್ದು?
ನಗುತ್ತಾನೆ ಕೆಲವೊಮ್ಮೆ
ಆಕಾಶ ನೋಡುತ್ತಾ
ಅವನ ಜೀವನದ ಸಂತೋಷದ
ಕ್ಷಣಗಳ ನೆನಪಲ್ಲೇ?
ಪಾಲು ಕೇಳಿವೆ ನಾಯಿಗಳು
ಆತನ ಆಹಾರದಲ್ಲಿ
ಸೊಳ್ಳೆಗಳು ಹೀರುತ್ತಿವೆ
ಅಳಿದುಳಿದ ಆತನ ರಕ್ತವನ್ನು
ಚಳಿಗೆ ಮುದುರಿಕೊಂಡಿದೆ
ಸಣಕಲು ದೇಹ
ಕೈಬೆರಳುಗಳು ಲೆಕ್ಕಾಚಾರದಲ್ಲಿ
ತೊಡಗಿವೆ-ಅಂತ್ಯಕ್ಕಿನ್ನೆಷ್ಟು ದಿನ?
*****


















