ಮೂಲ: ವಿಷ್ಣು ಡೇ
ನರಕ ಹೊರಕ್ಕೆ ಬರಲಿ, ಪಾಪಲೋಕ
ತಾಪದಿಂದ ಬಿಡುಗಡೆಯಾಗಲಿ;
ಕೊರೆವ ಮಂಜಿನ ದಾರಿ ಸವೆಸುತ್ತ ನಡೆಯುವ
ಕುಂತೀಪುತ್ರನ ಹಾಗೆ
ಶುದ್ದಿಲೋಕದ ಕಡೆಗೆ ಸಾಗಲಿ.
ಪಯಣಕ್ಕೆ ಜೊತೆಗಾರ ಅಪರಿಚಿತ ನಾಯಿ,
ಸತತ ಅನ್ವೇಷಣೆಯ ದಾರಿಯುದ್ದಕ್ಕೂ
ರಕ್ತ ಬಸಿಯುವ ಹೆಜ್ಜೆ;
ಹೆಜ್ಜೆ ಹೆಜ್ಜೆಗು ಕಾಟ ಕೊಡುವ ಹಮ್ಮು
ಆದರೂ ಸಾಗಿದೆ ಹೇಗೋ ಪಯಣ.
ಕತ್ತಿಯಲುಗಿನ ಮೇಲೆ ನಡೆವ ಪಯಣ ಘೋರ ವ್ರತಕ್ಕೆ ಬದ್ಧ
ಕೂಗಿ ಕರೆಯುತ್ತಾರೆ ತಾಯಿ, ಪತ್ನಿ, ಜೊತೆಗೆ
ಬೆನ್ನಲ್ಲಿ ಬಿದ್ದ ಸೋದರರು,
ಎಲ್ಲವೂ ವ್ಯರ್ಥ.
ತನ್ನ ಪಾಪವ ತಾನೇ ತೇದು ಸಮೆಸುತ್ತ
ದಾರಿ ಕರಗಿಸಬೇಕು ಆ ರಾಜಗೂಲಿ.
ಬಿದ್ದ ಹಿಮವನ್ನೆಲ್ಲ ಬದಿಗೆ ತಳ್ಳುತ್ತ
ನರಕದ ಕುದಿಬಾಣಲೆಗೆ ಎಲ್ಲರೆದುರೇ ತನ್ನ ತಲೆಯನ್ನೆತ್ತಿ
ಮರ್ತ್ಯರ ಜಗತ್ತಿನಲ್ಲೇ ತಾನು ಸಾಗುತ್ತ
ಚಿಂತಿಸುತ್ತಾನೆ ಅವನು;
ಸ್ವಂತದ ಸ್ವರ್ಗವನ್ನು ಸಾವಿನ ಕದದವರೆಗೆ
ಮರುಸೃಷ್ಟಿಸಿದ ಹಾಗೆ.
*****