“ಶಾಲೆಗೆ ಹೋಗುವುದು ಬೇಡ
ಖುರಾನ್ ಓದು ಅಷ್ಟೇ ಸಾಕು.
ಹೊರಗೆ ಹೋದಿಯಾ ಜೋಕೆ
ಬುರ್ಖಾ ಧರಿಸು”
ಇದು ಅಪ್ಪನ ಕಟ್ಟಾಜ್ಞೆ
ಬಕ್ರೀದ್ ಹಬ್ಬ ಬಂದಿತು
ಅಪ್ಪ ತಂದರು ಝುಮುಕಿ, ಬೆಂಡೋಲೆ
ಸುರ್ಮಾ, ಬಟ್ಟೆ, ಚಪ್ಪಲಿ,
ಅತ್ತರು, ಮೆಹಂದಿ, ಎಲ್ಲವು
ಖುಶಿಪಟೆ ಲಾಲಿ, ಬಳೆ
ಅರ್ರಶ್‌ನ* ಮಿಂಚುನೋಡಿ
ಹೊರಳಿದವು ಕಣ್ಣುಗಳು
ಖುರ್ಬಾನಿಯ ಮಾಂಸದ
ಸಮಪಾಲಿನ ಗುಡ್ಡೆಗಳ ಕಡೆಗೆ.
ಆಗಲೇ ಭಿರ್ರನೆ ಒಳಬಂದ ಸುಮಾ
ಹಬ್ಬದ ಶುಭಾಶಯ ಹೇಳಿದಳು
ಸೈಕಲು ಹತ್ತಿ ಬಿರುಗಾಳಿಯಂತೆ
ಕಾಲೇಜಿಗೆ ಹೊರಟೇ ಬಿಟ್ಟಳು
ಅವಳ ಹೊಳೆವ ಕಣ್ಣುಗಳ
ಕಾಂತಿ, ತೇಜಸ್ಸು, ಆತ್ಮವಿಶ್ವಾಸಗಳು
ನನ್ನಲೇಕೆ ಮೂಡಲಿಲ್ಲ?
ಹಬ್ಬದ ಸಂಭ್ರಮಗಳು
ನನ್ನಾತ್ಮದ ಹಸಿವನ್ನು
ಹಿಂಗಿಸಲಾರವೆಂಬ ಸತ್ಯ
ನಿನಗರ್ಥವಾಗುವುದಿಲ್ಲವೆ?
ಅಪ್ಪಾ! ನನಗೂ ಶಾಲೆಗೆ ಕಳಿಸು.
*****
(* ಮಿಂಚು ಅಥವಾ ಚಮಕಿ)


















