ತುಂಬುಪೆರೆಯನು ಕಂಡು ಕಡಲುಬ್ಬಿ ಹರಿವಂತೆ
ದೇಗುಲದೊಳುಬ್ಬುವೀ ಜನವ ಕಂಡು
ಉಬ್ಬುವುದು ನನ್ನ ಮನ ಮತ್ತೆಲ್ಲು ತಾಳದಿರು-
ವುಬ್ಬಿನೊಳು ಹಬ್ಬುಗೆಯ ರಸವ ಕೊಂಡು
ದಿವ್ಯ ನೀಲದ್ಯುತಿಯ ಹನಿಯನುಣಿಸುವ ಹೀರ-
ಮಕುಟದೆಳೆನಗೆಯ ಸುಂದರಮೂರ್ತಿಯ
ಕಂಡು ತರ್ಕದ ಬಿಗುಹ ಕಳೆದೆನ್ನ ಹೃದಯವಿದು
ಅರಳುವುದು ತಳೆದು ನೂತನದರ್ತಿಯ.
ಕಣ್ಣಿಗಾಗಿಹುದೆನಗೆ ಆತ್ಮವೇ ವಿಷಯದೆಡೆ ತೊಳಗುವಂತೆ
ರಹಸ್ಯರಸಚಿಂತನನೆ ಬಾಹ್ಯದೊಳಗೀತೆರದಿ ಮೊಳಗುವಂತೆ.
*****


















