ಪುಸ್ತಕಗಳಿವೆ ಅವು ಇರಬೇಕಾದ ಜಾಗದಲ್ಲಿ ಮರದ
ಆಟಿಕೆಗಳಲ್ಲಿ ಒಪ್ಪ ಓರಣವಾಗಿ ಪೆಪಿರಸ್ ಹಾಳೆಗಳಲ್ಲಿ
ಆದರೆ ಯಾಕೆ ಕಳೆದೊಂದು ವಾರದಿಂದಲು ಯಾವ
ಓದುಗರೂ ಬಂದಿಲ್ಲ-ಒಬ್ಬ ವೃದ್ಧ ವಿದ್ವಾಂಸನ ಹೊರತು?
ಆತ ಪ್ರತಿದಿನ ಬರುವವ ಗ್ರಂಥಾಲಯ ತೆರೆಯಲು ಕಾಯುವವ
ಇಡೀ ದಿನ ಇದ್ದು
ಮುಚ್ಚುವ ವೇಳೆ ಗೊಣಗುವವ
ಅವನಿಗೋಸ್ಕರವೆ ಬರುವಂತೆ ಬರುತ್ತಾನೆ ಗ್ರಂಥಪಾಲಕ
ಗ್ರಂಥಪಾಲಕನ ಮುಖದಲ್ಲೇನೋ ಸಾರ್ಥಕತೆ ಮತ್ತು ದುಗುಡ
ಏಕ ಕಾಲಕ್ಕೆ
ಕಸ ತೆಗವ ಆ ಸುಂದರ ಹುಡುಗಿಯೂ ಬರುತ್ತಿಲ್ಲ
ಕಿಟಿಕಿ ಮುಚ್ಚಿದರೂ ಬಂದು ಬೀಳುತ್ತದೆ ಉತ್ತರದಿಂದ ಧೂಳು ಕಸ
ಕೂತುಕೊಳ್ಳುತ್ತವೆ ಪ್ರತಿ ಪುಸ್ತಕದ ಮೇಲೆ
ಆ ಹುಡುಗಿಯ ಕೈಯ ಮಖಮಲ್ಲಿನ ವಸ್ತ್ರದ ಸುಖ
ಇವುಗಳ ಮೈಗೀಗ ಇಲ್ಲ
ಏನಾಗಿದೆ ಎಲ್ಲರಿಗೆ?
ಪುಸ್ತಕಗಳಿಗೆ ಗೊತ್ತಿಲ್ಲ
ಕೊಳ್ಳಿದೆವ್ವಗಳು ಬರುತ್ತಿದ್ದಾವೆ ಕತ್ತಲ ಕೂಪದಿಂದ ಅವು ಅಕ್ಷರ ದ್ವೇಷಿಗಳು
ಇಷ್ಟೊಂದು ದೊಡ್ಡ ಭಂಡಾರ ಉರಿಯಲೂ ಸಮಯ ಬೇಕು
ದೆವ್ವಗಳಿಗೆ ಅಸಹನೆ ಒಂದೇ ಒಂದು ಹಾಳೆಯನ್ನೂ ಬಿಡದೆ
ಉರಿಸಿದರೇ ತೃಪ್ತಿ
ಕವಿಗಳು ಕಲಾವಿದರು ವಿಜ್ಞಾನಿಗಳೀಗ ಭಸ್ಮೀಭೂತ ನಾಮಿಕರು ಅನಾಮಿಕರು
ಈ ಭೂರಿ ದಹನದಿಂದ ಲೋಕ ಚೇತರಿಸಿಕೊಳ್ಳುವುದಕ್ಕೆ ಇನ್ನು
ಅದೆಷ್ಟೋ ಕಾಲ ಬೇಕು ಆದರೂ ಕೊಳ್ಳಿ ದೆವ್ವಗಳು ನಾಶವಾಗುವುದಿಲ್ಲ ಯಾವತ್ತಿಗೂ
ಅವಕ್ಕೀಗ ಇರುಳ ಆಶ್ರಯ ಬೇಡ ಹಾಡು ಹಗಲೇ ಸುತ್ತಾಡುತ್ತವೆ
ಬೆಂಕಿ ಕಾಣುವುದಿಲ್ಲ ಆದರೂ ಬೆಂಕಿಯಿದೆ
ತೂಕಡಿಸುವ ಓದುಗರ ಮೈಮನಸು ನುಗ್ಗಿ
ತೀರಿಸಿಕೊಳ್ಳಲು ತಮ್ಮ ಕಾಲಾಂತರದ ಹಗೆ
ವೃದ್ಧ ವಿದ್ವಾಂಸನಿಗದು ಗೊತ್ತಿದೆಯೇ ಇಷ್ಟೊಂದು ಓದುತ್ತ?
*****


















