ಮಮ್ತಾಜ್ ನಾನೆಂತಹ ಬದ್‌ನಸೀಬ್* ನೋಡು
ನೀನು ಬಹಳ ಪುಣ್ಯವಂತೆ
ಬಾದಷಹ ಷಹಜಹಾನನು
ನಿನ್ನ ಅಮರ ಸೌಂದರ್ಯದ ಸ್ಮೃತಿಗೆ
ಸರಿಸಾಟಿಯಿಲ್ಲದ ಸುಂದರ ಇಮಾರತ್ತು ಕಟ್ಟಿಸಿದ.
ಶಹರ ಪಟ್ಟಣಗಳು ನರಕಕೂಪಗಳಾಗಿ
ನಿನ್ನ ಸಮಾಧಿಗೆ ಸಂಗಮರಮರಿಯ
ಹಾಲಿನಂತಹ ತಂಪು ಬೆಳದಿಂಗಳು
ನನ್ನ ಗೋರಿಯ ಸುತ್ತಲೂ ನೋಡು
ನಿಶಾನೆ ಅಳಿಸುತ್ತ ಕತ್ತಲ್ಲನ್ನಪ್ಪಿ ಮಲಗಿದೆ.
ನನ್ನದೆಂತಹ ಖೋಟಾ ನಸೀಬು ನೋಡು
ಸುತ್ತಲೂ ಮುಳ್ಳು ಕಂಟಿ ಗಿಡಗಳು
ನಿನಗೆ ಸಿಕ್ಕ ಸವಲತ್ತು, ದವಲತ್ತು ನನಗೆಲ್ಲಿ
ದಿನವೂ ರೊಟ್ಟಿಗಾಗಿ ಹೋರಾಡುತ್ತಲೇ ಸತ್ತೆ
ಹೆಣ ಹುಗಿಯಲು ಹಣ ಎಲ್ಲಿಂದ ತರಲಿ?
ನಿನ್ನ ಸಮಾಧಿಯನ್ನು ವಿಶ್ವವೇ ನೋಡುತ್ತಿದೆ
ನನ್ನ ಗೋರಿಯ ಗುರುತು ಹೇಗೆ ಉಳಿಸಲಿ?
ನಿನ್ನ ಸಮಾಧಿಯ ಮೇಲೆ ಗಲೀಫ್, ಹೂ, ಚಾದರ
ನನ್ನ ಗೋರಿ ಮೇಲೆ ಒಂದು ದಳವೂ ಇಲ್ಲ
ವಾರಸುದಾರರಿಲ್ಲದ ಪರದೇಶಿ ಗೋರಿ ನನ್ನದು.
ಬಡವರ ಗೋರಿಗೆ ಮಕಮಲ್ಲು ಚಾದರಿಲ್ಲ
ಗುರುತಿನ ಕಲ್ಲಿಲ್ಲ, ನೆರಳಿನ ಮರವಿಲ್ಲ
ಮುಮ್ತಾಜ್ ನೀನೆ ಪುಣ್ಯವಂತೆ ನೋಡು
ತಂಪುಬಿಳುಪಿನ ಸಂಗಮರಮರಿಯ ಛಾವಣಿ
ಕೆತ್ತನೆಯ ಸುಂದರ ಸಮಾಧಿ ನಿನ್ನದು.
ನನ್ನ ಹಾಳುಬಿದ್ದ ಸಮಾಧಿಗೆ ಸುಣ್ಣಬಣ್ಣವಿಲ್ಲ
ಒಣಗಿದ ಹೂವಿಗೂ ಗತಿಯಿಲ್ಲ ನೋಡು.
ನನ್ನ ಕಣ್ಣಿನಿಂದ ಉದುರಿದ ಉಪ್ಪು ನೀರಿಗೆ
ನರಕದ ನಿಗಿನಿಗಿ ಕೆಂಡದ ಬಿಸಿ ಬೂದಿಯಾಯ್ತು.
ಎಲ್ಲರ ಗೋರಿ ಖಬರಸ್ತಾನದಲ್ಲಿದ್ದರೆ ನಿನ್ನದು ಮಾತ್ರ
ಸುಂದರ ಯಮುನೆಯ ತಟದಲ್ಲಿದೆ.
ವಾರಸುದಾರರಿಲ್ಲದ ನನ್ನ ಪರದೇಶಿ ಗೋರಿಗೆ
ಅಸಂಖ್ಯಾತ ಬಡವರ ಕಣ್ಣೀರುಗಳೇ ಕೊಡುಗೆ ನೋಡು.
*****
* ಖೊಟ್ಟಿ ಹಣೆಬರಹ


















