ಮೌನ!
ದೂರ ಬೆಟ್ಟಸಾಲು ಕಣಿವೆ,
ಶಾಂತ ಸರೋವರದ ತನಕ
ಅಂಕು ಡೊಂಕು ಕವಲು ಹಾದಿ
ಉದ್ದಕ್ಕೂ ಹುಲ್ಲು ಹಾಸಿನ ಮೇಲೆ
ಧ್ಯಾನಾಸಕ್ತ ಮೌನ ಮಲಗಿತು
ಸದ್ದು ಗದ್ದಲವಿಲ್ಲ
ಮೌನದಾವರಣ ಹೊದ್ದು!
ಜುಳುಜುಳು ಹರಿವ ನದಿ
ಗಾಳಿಯ ಸರಪರ ಶಬ್ದ
ಹಕ್ಕಿಗಳ ಚಿಲಿಪಿಲಿ ಗಾನ
ಗಾಳಿ ತೆಕ್ಕೆಯಲಿ ಕುಣಿವ
ಚಿಟ್ಟೆ ಬಳಗದ ನರ್ತನ
ಎದೆ ಮಿಡಿತದ ಸದ್ದು
ಕೇಳುವ ಮೌನದ ಹೊತ್ತು
ನಾನು ಮಾತಾಡುತ್ತಿದ್ದೆ
ಶಬ್ದವಿಲ್ಲ ತುಟಿ ಬಿಚ್ಚಲಿಲ್ಲ
ಕಣ್ಣಿನ ಭಾಷೆಯೂ ಅದಲ್ಲ
ನೀ ನನ್ನ ಸನಿಹವೇ ಇದ್ದೇ
ಆದರೆಲ್ಲೊ ಕಳೆದು ಹೋಗಿದ್ದೆ
ನನ್ನ ಉಸಿರಿನ ಶಬ್ದ
ಕೇಳುವ ಹೊತ್ತು!
ಹೃದಯದ ಆ ಮಾತು
ನಿನಗೇಕೆ ಅರಿವಾಗಲಿಲ್ಲ?
ನಿನ್ನ ಗ್ರಹಿಕೆಗೂ ಸಿಕ್ಕಲ್ಲಿಲ್ಲ
ಶಬ್ದ ರೂಪವ ಪಡೆದು
ಗಂಟಲು ಬಿಟ್ಟು
ಹೊರಗೆ ಬರಲೇ ಇಲ್ಲ
ಮೌನದ ಆ ಮಾತು!
ನೀಳ ಉಸಿರನು ಮಿಂದು
ಜೀವ ಮಿಡಿತದ ಸದ್ದು
ಕೇಳಿ ಬರುತ್ತಿದ್ದ ನೀರವ ಕ್ಷಣಗಳಲ್ಲಿ
ಅಂತರಂಗದ ಮಾತರಿಯಲು
ನೀನಲ್ಲಿ ಇರಲೇ ಇಲ್ಲ
ಮೌನ ಮಾತಾಡಿದ ಹೊತ್ತಲ್ಲಿ
ಎಲ್ಲೋ ಕಳೆದು ಹೋಗಿದ್ದೆ!
*****


















