ಖುರಪುಟದ ಹೆಜ್ಜೆ ಬಡಿತದ ಶಬ್ದ,
ಭಗ್ನ ಅವಶೇಷಗಳಡಿ ಕಾಲನ ಉಸಿರು
ಮುರಿದು ಬಿದ್ದಚಕ್ರದ ಗಾಲಿ,
ಗಡಿಯಾರ ಮುಳ್ಳಿನ ರಿಂಗಣ
ಕಾಮನ ಬಿಲ್ಲಿನ ನೆರಳು ಸಿಗದು.

ಆಗಸದಲಿ ಹರಡಿದ ಬಟ್ಟೆಯಲ್ಲಿ
ತೆಗೆದಿಟ್ಟ ಚುಕ್ಕಿಗಳ ಮೂಟೆ
ಮೌನ ಬಿಕ್ಕುವ ಮಾತುಗಳನ್ನು
ಕೊಳೆಹಾಕಿದೆ ಹಳೆಯ ಕಪಾಟಿನಲ್ಲಿ
ಕೊಂಪೆ ಸಾಮ್ರಾಜ್ಯದ ಪಳಯುಳಿಕೆ

ಹಳಸಿದ ಸಾಕ್ಷ್ಯಗಳ ಚೀಲದಲ್ಲಿ
ಪತನವಾದ ಹಳೇ ಸಾಮ್ರಾಜ್ಯ
ಭಾವಿ ಕಟ್ಟೆಯ ಗಡಗಡೆ ಶಬ್ದ
ಜೊತುಬಿದ್ದ ದಳಪತಿಯ ಖಡ್ಗಕ್ಕೆ
ಜೇನು ಹುಳು ಗೂಡುಕಟ್ಟಿ.
ಎಷ್ಟೊಂದು ಪ್ರಾತಿನಿಧಿಕ ತಿಕ್ಕಾಟ
ಸಿಂಹಾಸನ ಪಲ್ಲಕ್ಕಿಗಳಡಿ
ಆಕಾಶಕ್ಕೆ ಏಣಿ ಹಾಕಿದೆ
ಪರಾಕು, ಪತಾಕೆಗಳ ಉತ್ಪನನದಲ್ಲಿ
ಇಲಿ, ಹೆಗ್ಗಣಗಳ ಜಿರಲೆ ಹರಿದಾಟ.

ಸಾಮ್ರಾಜ್ಯಗಳ ಸಮಾಧಿಯಲ್ಲಿ
ಇಂಗಿಹೋದ ರಕ್ತ ಮಾಂಸಗಳು
ತೇಲಾಡುವ ಅಸ್ತಿ ಪಂಜರಗಳು
ಅವಶೇಷ ಪ್ರೇತಾತ್ಮ
ಕಾಲವಾದ ಅಧಿಪತ್ಯ
ಕ್ಷೀಣ ಕಾಲನ ಬಿಕ್ಕುಗಳು.
*****