
೧
ತಾರಿನ ತಂತಿಯ ಮೇಲೆಯ ನಲಿಯುತ
ತಾನವ ನೀಡುತ “ಕುಕೂಕು”
ನಾದವನೆಬ್ಬಿಸಿ ಬೂದಿಯ ಬೆಳವನು
ಮೇದಿನಿ ಮೈಸಿರಿ ಮೆರಿಸುತಿದೆ
೨
ಬದುವಿನ ಬೇವೊಳು “ಕುವೋಽ” ಎನ್ನುತ
ರಾಗದ ಕೋಗಿಲೆ ಕೂಗುತಿದೆ
ಇನಿದನಿಯೆರಡನು ಮನದಿಂದಾಲಿಸೆ
ಹರಣವು ಹರುಷದೆ ಹಾರುತಿದೆ
೩
ಚಿತ್ತಮದೊಂದೇ ಇಂಚರಮೆರಡೇ
ಮಿಂಚಿನ ಮೇಳದೆ ಬೆಳೆಯುತಿವೆ
ವಿಶ್ವಾಧೀಶನ ದೇಹಾನಂತ್ಯದ
ಲೀಲೆಯ ಹೊಲಬನು ತಿಳಿಸುತಿವೆ
೪
ಬಹುರವಗಳನಾ ಬಹುಪಯಾಲಿಸೆ
ಕೊನೆಯಲಿ ಕಾವ್ಯದ ಸೀಮೆಯಲಿ
ಕುಳಿತೋಲಾಡುತ ಕೇಳುವೆನೊಂದನೆ
ಇರವನು ಮರೆದಿ ತಿರೆಯಲ್ಲಿ
*****


















