ದಾರುಣತೆ ವಿಪ್ಲವದ ಮೊದಲಿತ್ತು ಜತೆಯಿತ್ತು
ಆಮೇಲೆಯೂ ಇತ್ತು
ವಿಪ್ಲವಕ್ಕೊಂದು ಕಾರಣವಾಗಿ ಇತ್ತು
ಆಮೇಲೊಂದು ನೆನಪಾಗಿಯೂ ಇತ್ತು
ಒಂದು ಆಕರ್ಷವಾಗಿ ಮತ್ತೊಂದು ದುಃಸ್ವಪ್ನ
ವಾಗಿ
ಕಾಡುತ್ತ ಇದ್ದುವು ವ್ಯಾಘ್ರದ ವ್ರಣದಂತೆ
ಇದ್ದ ಮೂವರಲ್ಲೇ ಆಗಬೇಕು ಈ ಎಲ್ಲ
ಸೃಷ್ಟಿ ಸ್ಥಿತಿ ಲಯ
ಒಂದೊಂದರಲ್ಲಿ ಇನ್ನೆರಡು ಇದ್ದುವು
ಆದಿಮ ವಿರೋಧಾಭಾಸ
ವಂಶವ್ಯಾಕರಣಕ್ಕೆ ಸವಾಲು ನೀಡಿ
ಆದಿಮ ಕರಡಿ
ಪ್ರಜಾಪತಿಯ ನಾನು ತಯಾರು ಮಾಡಿದೆ
ಬಟ್ಟೆಬರೆ ಚಿಂದಿಚೂರುಗಳಿಂದ
ಒಡಕುಗಳನಿಟ್ಟು ಕಣ್ಣು ಕಿವಿ ಬಾಯಿ ಮೂಡಿಸಿದೆ
ಬೀದಿಯಲ್ಲಿರಿಸಿದೆ
ಆಮೇಲೆ ಅದು ಬೀದಿಯ ತೆಗೆದುಕೊಂಡಿತು
ನದಿಯ ತೆಗೆದುಕೊಂಡಿತು
ಸಮುದ್ರ ಆಕಾಶ ತನ್ನದೇ ಎಂದಿತು
ಅದರ ಕಿವಿ ಹರಿದು ತೆಗೆದೆ
ಕಣ್ಣು ಕುರುಡಾಗಿಸಿದೆ
ಬಾಯಿಗೆ ಬೀಗ ಜಡಿದು ಸಮುದ್ರಕ್ಕೆ ಎಸೆದೆ
ಅಲ್ಲಿಂದಲೇ ಅದು ಗಳಗಳ ಎನ್ನುತ್ತಿದೆ
ನನಗೆ ಗೊತ್ತು ಅದು ಉತ್ತರ ಕೇಳುತ್ತಿದೆ
ಯಾಕೆ ಯಾಕೆ ಯಾಕೆ
ಅಲ್ಲೀ ತನಕ ಅದು ಸಮಾಧಾನವಾಗದು
ಗಳಗಳ ಎನುವುದು
*****

















