ಗಾಳಿಯಲಿ ಬರೆಯುವೆನು ನೀರಲ್ಲಿ ಬರೆಯುವೆನು
ಚಿರಂತನ ಸತ್ಯಗಳ
ಬರೆಯುತ್ತಲೇ ಅವು ಅಳಿಸಿದರೆ ತಾನೆ
ಶಾಶ್ವತೆಗೆ ಸಾಕ್ಷಿ
ಕಲ್ಲಲ್ಲಿ ಬರೆದವು ಕೋಟೆ ಗೋಡೆಗಳಾದುವು
ಮರದಲ್ಲಿ ಬರೆದುವು ಬಾಜರ ಕಂಭಗಳಾದುವು
-ಅಂದನು ದೀರ್ಘತಮಸ್
ಮರ್ತ್ಯದಲ್ಲಿರಿಸುವುದು ಮನುಷ್ಯರನು ಮೋಡದಲ್ಲಿರಿಸುವುದು
ಮಳೆನೀರನು ಹಾಗೂ ಅಕ್ಷರದಲ್ಲಿರಿಸುವುದು
ಕವಿತೆಯನು
ಮರ್ತ್ಯ ಮತ್ತು ಅಮರ್ತ್ಯಕ್ಕೆ ಮೋಡವೆನ್ನುವುದೊಂದು ಸೇತು
ಅಂತೆಯೇ ಕವಿತೆ
ಮಳೆಗರೆದು ಮೋಡ ಮನುಷ್ಯರಿಗೆ
ದೇವತೆಗಳ ತೋರಿಸುವುದು
ಕವಿತೆ ಏನನ್ನೂ ತೋರಿಸದು ಈ
ವಿದ್ಯಮಾನವನ್ನಲ್ಲದೆ
ಮೋಡದಲ್ಲಿರುವ ನೀರು ಯೋಚನಾಮಯಿ
ಅದು ಭೂಮಿ ಸಮುದ್ರಗಳ ಬಗ್ಗೆ ಯೋಚಿಸುವುದು
ಕವಿತೆ ಇನ್ನೇನನ್ನೂ ಯೋಚಿಸದು
ಈ ಬಗೆಯನ್ನಲ್ಲದೆ
*****

















