
ಕಾದ ಭುವಿಯ ಒಡಲಿಗೆ
ಮುಂಗಾರಿನ ಪನ್ನೀರ ರಂಗವಲ್ಲಿ
ಗುಡುಗು-ಸಿಡಿಲಿನ ಘನರವ
ಬಾನಂಗಳದಲ್ಲಿ
ಬೀಸುವ ಗಾಳಿ ಎಬ್ಬಿಸಿದ ತಲ್ಲಣ
ಹದಿಹರೆಯದ ಎದೆಯೊಳಗೆ
ಗರಿಗೆದರಿದ ನೂರು ಆಸೆಗಳು
ಮಿತಿಮೀರಿದ ಪುಳಕ
ಬಾಡಿದ ತರು ಚಿಗುರೊಡೆದಿದೆ
ಚಾಚುತ್ತಿದೆ ತನ್ನ ಮೈಕೈಯ
ಮಣ್ಣಿನಲ್ಲೇ ಹುದುಗಿದ್ದ ಬೀಜದಿಂದ
ಕವಲು ಹೊರಟಿದೆ
ಕುಳಿರ್ಗಾಳಿಯ ಚಳಿಗೆ
ಮೈ ರೋಮಾಂಚನ
ಸಾವಿರ ಕಾಮನೆಗಳು
ಭುಗಿಲೆದ್ದಿದೆ ಮನದೊಳಗೆ
ಇಳೆಯನ್ನು ಒದ್ದೆ,ಮುದ್ದೆ ಮಾಡಿ
ನಿಂತಿತ್ತು ಪನ್ನೀರ ಚಿಲುಮೆ
ಮಳೆ ಬಿಟ್ಟು ಹೋದ
ಮಣ್ಣಿನ ವಾಸನೆ ಇನ್ನೂ ನಿಂತಿಲ್ಲ
*****

















