ಜಗದೆಲ್ಲ ಜೀವಿಗಳ ಕರ್ಮರಸ ಪಾದಪಂ
ಜೀವವಿದು ಮರ್ಮರಿಸುವುಲಿಯೆಲೆಯೊಳು
ಆ ಬೆಳಕಿನುಸಿರಾಡಿ ಮೂಲಸತ್ವದ ಹೊಗಳ
ತಳೆದು ಕಂಪಿಸುತಿಹುದು ಸಡಗರದೊಳು.
ಹರಣವೆ ಹಸಾದವೆನೆ ವಿಶ್ವ ಶಿವಪದವೆನ್ನೆ
ನಲವೆಲ್ಲೆ ಗೆಡೆಸಿಹುದು ನಡುಗಡ್ಡೆಯ;
ಎಲ್ಲ ತಿಳಿವನು ಕಳೆದು ನಗ್ನವಾಯ್ತೆಚ್ಚರಿಕೆ,
ಗಳಹುತಿಹೆನಳಿದು ಬಲ್ಲರ ಸಡ್ಡೆಯ
ಮೊರೆವ ಸೊದೆಯಲೆಗಡಲ ನಂಜಿನೊಳು ಪವಡಿಸಿಹನ
ಕವಿದು ಬಹ ಮುದದ ನಡುವಣ ಚಿತ್ತದೊಳಗಿಡುತಲವನ.
*****

















