ಇತಿಹಾಸದ ದಾರಿ ನೇರವಾಗಿತ್ತೆ ಎಂದಾದರೂ
ಎಡವಿಕೊಂಡೇ ಬಂದಿತೆ ಅದು ಇಲ್ಲೀವರೆಗೆ
ಇಲ್ಲಿಂದ ಇನ್ನೆಲ್ಲಿಗೆ ಕೋ ವಾಡಿಸ್ ಎನ್ನುತ್ತ ಪ್ರತಿಯೊಂದು ಬಾರಿ?
ದಾರಿ ಇದ್ದಿದ್ದರೆ ತಾನೆ ಅದಕ್ಕೆ ದಾರಿ ಕೇಳುವುದಕ್ಕು? ದಾರಿಯಿಲ್ಲದಲ್ಲಿ
ಸಾಗುವುದು ಇತಿಹಾಸ
ನನಗಿಷ್ಟೆ ಗೊತ್ತು
ಸಹಸ್ರಾರು ಗಾಯಗಳು ಗಾಯದ ಮೇಲೆ ಬರೆಗಳು
ಕೆಲವು ಮಾಯ್ದಿವೆ ಕಾಲಾಂತರದಲ್ಲಿ ಕಾಣಿಸದಾಗಿವೆ
ಕೆಲವು ವ್ರಣಗಳಿನ್ನೂ ಸೋರುತ್ತಿವೆ
ಇತಿಹಾಸದ ಬೃಹತ್ತು ತಾಳುವಂಥದು ನಮಗೆ
ಗೊತ್ತಾಗುವುದಿಲ್ಲ
ಇತಿಹಾಸದ ಸುಸ್ತೆನ್ನುವುದಿದೆ ಹೆಬ್ಬಂಡೆಗಳ ಮೇಲೆ ಕುಳಿತು
ದಣಿವಾರಿಸಿಕೊಳ್ಳುವುದು ದೈತ್ಯ ಇಗುವಾನ ಕುಳಿತ ಹಾಗೆ
ಸತ್ತಂತೆ ಸತ್ತಿತೆಂದರೆ ತಲೆಯಾಡಿಸುವುದು
ಅದರ ಹಿನ್ನೋಟ ಅಂಥ ಕಾಲದಲಿ
ಭೀಕರ ಚಂಡಮಾರುತಕ್ಕೆ ಅಪ್ಪಳಿಸುವ ಮರ
ಅಲ್ಲಲ್ಲಿ ಗೂಡುಕಟ್ಟಿರುವ ಇರುವೆಗಳು
ಕೆಲವು ಬಿದ್ದು ಸಾಯುತ್ತವೆ ನೆಲದಲ್ಲಿ
ಇನ್ನುಳಿದವು ಹಾಗೇ ನೋಡುತ್ತವೆ ಬೆಪ್ಪಾಗಿ
ಎಲ್ಲಿ ಅಡಗಿರುತ್ತದೆ ಇತಿಹಾಸದ ಕ್ರತುಶಕ್ತಿ
ಎಂದು ಕೇಳುತ್ತೇನೆ
ರಾಜನಲ್ಲಿ ಅಥವ ವಿದೂಷಕನಲ್ಲಿ?
ಆಟದ ಗೆಲುವು ಎಲ್ಲಿರುತ್ತದೆ ಇದೊಂದು
ಆಟವೆ ಆಗಿದ್ದಲ್ಲಿ
ಆಡಿದವನ ಕೈಯಲ್ಲಿ ಅಥವ ಕಾಯಿಯ ವಕ್ರತೆಯಲ್ಲಿ?
ನದಿ ಮತ್ತು ಸೇತು ಗಿರಿ ಮತ್ತು ಸುರಂಗ
ಹಡಗವೂ ತುಫಾನವೂ ಯಾವುದು
ಯಾವುದು?
ಇಷ್ಟು ದೂರಕ್ಕೆ ವಕ್ರತೆಯೆನ್ನುವುದೇ ಇಲ್ಲ
ಎಲ್ಲ ವಕ್ರತೆಗಳೂ ಸರಳ ರೇಖೆಗಳೆ ಯಾಕೆಂದರೆ ನಾವು ಅನಂತತೆಯ
ಅಂಚಿನಲ್ಲಿದ್ದೇವೆ ಇಣುಕುತ್ತ
ಚಂದ್ರನ ಆಳಗಳೂ ದೃಷ್ಟಿ ಬೊಟ್ಟುಗಳೆ
ಸರಿ ತಪ್ಪು ನ್ಯಾಯಾನ್ಯಾಯಗಳು ಮೆನೆಖಿಯನ್ ವಿಂಗಡನೆ
ಇಂದು ಕಾರಣ ನೀಡಿದಷ್ಟೂ ದ್ವಂದ್ವಗಳು ನಾಶ
ಇತಿಹಾಸವೊಂದು ಕಂಟಿನ್ಯೂವಂ
ಅಥವ ತರಂಗಾಂತರಂಗ?
ಕತ್ತಲಿಲ್ಲದ ಬೆಳಕಿಲ್ಲದ ಮಬ್ಬಿನ ಪ್ರದೇಶ
ಯಾರು ಸಂಜ್ಞಾದೇವಿ ಯಾರು ಛಾಯಾದೇವಿ
ಪುರಾಣಗಳ ನಾಶಪಡಿಸಿದ ಇತಿಹಾಸ ಬೇರ್ಪಡಿಸುವಂತಿಲ್ಲ
ಕಾಯದಿಂದ ಛಾಯೆಯ
ಅದು ಹಿಂದೆ ನೋಡಿದಾಗ ತನ್ನ ಕಣ್ಣನ್ನೆ ಕಂಡ ಹಾಗೆ
ಮುಂದೆ ನೋಡಿದಾಗ ಅದಕ್ಕೆ ಕಣ್ಣುಗಳೆ ಇಲ್ಲ
*****


















