ನಮ್ಮ ಮೈಯುರಿತಕ್ಕೆ ಪೂರ್ವಜರ ಹಳಿಯುವುದೆ?
ಸತ್ತವರನೆಬ್ಬಿಸಿ ಒದೆಯುವುದೆ ಅವರ ಅಳಿದುಳಿದ ಮೂಳೆಗೆ?
ಸಾಧ್ಯವಿದ್ದರೆ ಅವರು ತಡವುತಿದ್ದರು ನಮ್ಮ ಉತ್ಥಾನ ಪಾದಗಳ
ದೇವರ ಕೊಂದು ಕೈತೊಳೆದು ಇನ್ನೂ ಆಗಿಲ್ಲ ಇನ್ನೂರು ವರ್ಷ
ಆಗಲೇ ಇನ್ನಷ್ಟು ಹತ್ಯೆಗಳ ತವಕ ಇದಕಿಂತ ಮಿಗಿಲಾದ
ಪಾತಕ ಇನ್ನಿಲ್ಲ
ಗುರುವಿಲ್ಲ ಗುರುಸಮಾನರಿಲ್ಲ ಪೂಜನೀಯವಿಲ್ಲ ಪೂಜ್ಯ
ಸ್ಥಳ ಯಾವುದೂ ಉಳಿದಿಲ್ಲ
ಅಘೋರಿಗಳ ನಾಡು ನಿಂತಲ್ಲಿ ಶ್ಮಶಾನ ಕುಳಿತಲ್ಲಿ ಸಮಾಧಿ
ಉಗುಳು ನುಂಗಿದಲ್ಲಿ ತೀರ್ಥ
ಮುಖ ಮುಖ ನೋಡುತಿವೆ
ಪ್ರಚ್ಛನ್ನ ಸಮರ
ಆಯುಧ ಮೊದಲು ತೆಗೆದವರು ಗೆದ್ದರು
ಬಿಟ್ಟುಕೊಟ್ಟವರು ಸೋತರು
ಯಾರಿಗೂ ವಿರೋಧಿಗಳಲ್ಲದೆ ಇನ್ನೇನೂ ಗೋಚರಿಸುವುದಿಲ್ಲ
ಪಾರ್ಶ್ವ ದೃಷ್ಟಿಯ ಕಳಕೊಂಡ ಮನುಷ್ಯ ಎಷ್ಟು ನೋಡಿದರೇನು
ಏನೂ ಕಾಣಿಸರು-ರಸ್ತೆ ಬದಿಯ ಹೂವು ಬೆಟ್ಟದ ಮರೆಯ ನೆರಳು
ಕುರಿಗಳ ಹಿಂಡು ಆಚೀಚಿನ ಮನೆ ಬೀದಿ ಬಯಲು
ನೆಟ್ಟ ದೃಷ್ಟಿಗೆ ಕಾಣಿಸದು ನೀರಿನ ಆಳ ನೆಟ್ಟ ದೃಷ್ಟಿಗೆ ಬರೀ
ನೇರತ್ವದ ಅಹಂಕಾರ ಅದರ ಕಠೋರತೆಯ ತಿದ್ದುವುದಕ್ಕೆ
ಓರೆ ನೋಟವೆ ಬೇಕು ಓರೆ ಬೈತಿಲೆ ಹೆದ್ದಾರಿಗೆ ಅಡ್ಡದಾರಿಯ ಸ್ಪರ್ಶ
ಗಲ್ಲಿ ಗಲ್ಲಿಗಳ ಸುತ್ತಾಡಿಸಿ ತೋರಿಸುವುದು ಆ ಅಂಥ ದೃಶ್ಯದ
ಮುಂದೆ ಇಂಥ ದೃಶ್ಯ? ಅಲ್ಲಿಂದ ಬಂದವ ಮತ್ತೆ
ಮೊದಲಿನಂತಿರುವುದಿಲ್ಲ
*****

















