ಈ ಸುಮ್ಮನೆ ಕುಳಿತವನೆ
ಈ ಬಿಮ್ಮನೆ ಕುಳಿತವನೆ
ನನ್ನವನೆ
ಕಾಡಿದವನೆ ಬೇಡಿದವನೆ
ಆಡಿದವನೆ ಕೂಡಿದವನೆ
ನನ್ನವನೆ
ಏನಿದ್ದರು ಎಲ್ಲಿದ್ದರು
ಇವ ನನ್ನವನೆ
ಓ ಶಿವನೆ
ಎಂತಾದರು ಏನಾದರು
ಇವ ಹೀಗೇ ಇರಲಿ
ಇವ ನನ್ನವನೆ
ಸಾಗರದಂತೊಮ್ಮೆ ಭೋರ್‍ಗರೆವನು
ನೆರೆಯಿಳಿದಂತಿನ್ನೊಮ್ಮೆ ಇಳಿಯುವನು
ಕಾಳ್ಗಿಚ್ಚಿನಂತೊಮ್ಮೆ ಉರಿಯುವನು
ಹನಿ ಮಳೆಯಂತಿನ್ನೊಮ್ಮೆ ಸುರಿಯುವನು
ಕೆಲವೊಮ್ಮೆ ಇವ ನನಗಾಗಂತುಕನು
ಯಾರಿವನೋ ನಾನರಿಯೆನು
ಏನಿವ ಯೋಚಿಸುವ ಏನಿವ ಚಿಂತಿಸುವ
ಯಾವ ಸ್ಮೃತಿಯೋ ಯಾವ ಕನಸೋ
ಕೆಲವೊಮ್ಮೆ ಇವ ಗಾಜಿನಂತೆ ಪಾರದರ್‍ಶಕ
ಜನ್ಮಾಂತರದ ಗೆಳೆಯ
ಇವನ ಸ್ಮೃತಿಯೇ ನನ್ನ ಸ್ಮೃತಿ
ಇವನ ಕನಸೇ ನನ್ನ ಕನಸು
ಕೆಲವು ಸಲ ನಾವು ಸಮಾನಾಂತರ ಗೆರೆಗಳು
ಅನಂತದಲ್ಲಲ್ಲದೆ ಇನ್ನೆಲ್ಲೂ ಸೇರೆವು
ಕೆಲವು ಸಲ ಆ ಅನಂತವೇ ನಾವು
ಎಲ್ಲ ಅಂತರಗಳೂ ಕೊನೆಗೊಂಡು ಅದೆಂಥ ಪ್ರಶಾಂತವು
*****


















