ಮಳೆಗಾಲದ ಕಾರ್ಮೋಡಗಳು
ಚೆಲ್ಲಾಟವಾಡುತ್ತಿವೆ
ಭಾವದೆಲ್ಲೆಯ ಮೀರಿ
ಹಮ್ಮು-ಬಿಮ್ಮುಗಳ ಹಂಗಿಲ್ಲದೆ
ಒಂದರ ಮೇಲೊಂದು ಏರಿ
ಮಾಡುತ್ತಿವೆ ಸವಾರಿ
ತುಂಬಿಕೊಂಡಿದೆ ಅದೆಷ್ಟೋ ಹನಿಗಳನ್ನು
ತಮ್ಮ ಒಡಲೊಳಗೆ
ದೂರದಿಂದ ಓಡಿಬಂದು
ಅಪ್ಪಿಕೊಳ್ಳುತ್ತವೆ ಒಂದನ್ನೊಂದು
ಅದೆಷ್ಟೋ ವರ್ಷಗಳಿಂದ ಅಗಲಿರುವ
ಪ್ರೇಮಿಗಳ ರೀತಿ
ಮೋಡ-ಮೋಡಗಳ ಸಮ್ಮಿಲನದಿಂದ
ಹುಟ್ಟಿದೆ ಗುಡುಗು-ಸಿಡಿಲು-ಮಿಂಚು
ಮತ್ತೊಂದಿಷ್ಟು ಮಳೆಹನಿ
ಧರೆಯನ್ನು ತಂಪು ಗೈಯಲು
ಮೋಡಗಳ ಸಮ್ಮಿಲನಕ್ಕೆ
ಯಾವ ಅಡ್ಡ ಗೋಡೆಯಿದೆ ಹೇಳಿ?
ಜಾತಿಯೇ? ನೀತಿಯೇ?
ಅಲ್ಲ; ಇರುವುದೊಂದೇ ಕೇವಲ ಪ್ರೀತಿ
ಹುಟ್ಟಿವೆ ಮಳೆಹನಿಗಳು
ಮೇಘ-ಮಿಲನಕ್ಕೆ ಸಾಕ್ಷಿಯೆಂಬಂತೆ
ಭೂಮಿ ಅಣಿಯಾಗುತ್ತಿದೆ
ಆಹ್ವಾನಿಸಲು ಪ್ರಿಯತಮನನು ಆಲಿಂಗನಕ್ಕೆ.
*****


















