ಎಲ್ಲರಂಥವನಲ್ಲ
ನಮ್ಮ ಗೊಮ್ಮಟ
ಮಳೆಯಲು ಬಿಸಿಲಲು
ಇವನೊಬ್ಬನೆ ಮನ್ಮಥ
ಏನು ಮೈ ಏನು ಮಾಟ
‘ಏನುದಾತ್ತ ನೋಟವು
ಹುಟ್ಟಿದುದಕೆ ಸಾರ್‍ಥಕವಾಯ್ತೊ
ಇವನು ನಿಂತ ಬೆಟ್ಟವು
ರಾಜ್ಯ ಬಿಟ್ಟು ವಿರಾಜಮಾನ
ಈ ವರ್‍ಧಮಾನ
ಯುಗದಗಲ ಜಗದಗಲ
ಈ ಪ್ರವರ್‍ಧಮಾನ
ಎಂಥ ಮನದ ಎಂಥ ಜನದ
ಜಿನಕಲ್ಪನವೀತನ
ಬಾಹು ಬಲಕಿಂತ ಮನೋ-
ಬಲವೆ ಬಲ ಎಂದವನ
ಪಾದ ನಾವು ತಬ್ಬುವೆವು
ಬೆರಳ ನಾವು ಮುಟ್ಟುವೆವು
ತಲೆಯೆತ್ತಿ ಬೆರಗಾಗಿ
ಎತ್ತರೆತ್ತರ ನೋಡುವೆವು
ನಿಂತರಿಂತು ನಿಲಬೇಕಯ್ಯ
ಎಂದು ಹೇಳಿಕೊಳ್ಳುವೆವು
ಗೆದ್ದರಿಂತು ಗೆಲಬೇಕಯ್ಯ
ಎಂದು ಕೊಂಡಾಡುವೆವು
ಹಾಲುತುಪ್ಪ ಕಾಡ ಜೇನು
ಮಹಾಮಸ್ತಕಾಭಿಷೇಕ
ಸುರಿದರೆಷ್ಟೊ ಉದಕವನೂ
ಇವನಿಗೆಲ್ಲ ರೂಪಕ
ಸವಣರಾಗದವರು ಯಾರು
ಇಂಥ ಜಿನನ ಮುಂದೆ
ಉಳ್ಳವರೂ ಇಲ್ಲದವರೂ
ತೊಪ್ಪದೊಂದೆ ಮುಂದೆ
ಕಾಲಚಕ್ರ ಸಾಗೀತೆ
ಇವನ ಚಿತ್ತದೆಡೆಗೆ
ಧರ್‍ಮಚಕ್ರ ಉರುಳೀತೆ
ಇವನ ಸತ್ಯದೊಳಗೆ
ಕೇಳಬೇಕು ಎಲ್ಲರೂ
ಕೇಳಿದವರೇ ಉತ್ತರ
ಇಲ್ಲದಿದ್ದರೇನು ಬಂತು
ಏರಿ ಅಷ್ಟು ಎತ್ತರ
*****


















