ಯಾರು ಏನು ಯಾಕೆ ಎಂದು
ಹೇಳುವವರು ಯಾರು ಇಲ್ಲ
ಕೇಳುವವರೆ ಎಲ್ಲರು
ಮರವು ತಾನೆ ಏರದು
ದಾರಿ ತಾನೆ ನಡೆಯದು
ಕತೆಯು ತಾನೆ ಹೇಳದು
ಕವಿತೆ ತಾನೆ ಹಾಡದು
ಎಲ್ಲಿ ಕಾರ್‍ಯ ಕಾರಣ
ಮಳೆಯು ತಾನೆ ಸುರಿಯದು
ನದಿಯು ತಾನೆ ಹರಿಯದು
ಕಡಲು ತಾನೆ ಉಕ್ಕದು
ನೌಕೆ ತಾನೆ ಸಾಗದು
ಎಲ್ಲಿ ಕಾರ್‍ಯ ಕಾರಣ
ಸಿಡಿಲು ತಾನೆ ಸಿಡಿಯದು
ಗುಡುಗು ತಾನೆ ಗುಡುಗದು
ಬಿರುಗಾಳಿ ತಾನೆ ಬೀಸದು
ಬೆಂಕಿ ತಾನೆ ಉರಿಯದು
ಎಲ್ಲಿ ಕಾರ್‍ಯ ಕಾರಣ
ನೂಲು ತಾನೆ ಸುತ್ತದು
ಹಾಲು ತಾನೆ ಕುದಿಯದು
ಬಲೆಯು ತಾನೆ ನೇಯದು
ನೆಲೆಯು ತಾನೆ ಸಿಕ್ಕದು
ಎಲ್ಲಿ ಕಾರ್‍ಯ ಕಾರಣ
ಗಂಟೆ ತಾನೆ ಬಡಿಯದು
ಶಂಖ ತಾನೆ ಊದದು
ಪ್ರಶ್ನೆ ತಾನೆ ಕೇಳದು
ಉತ್ತರ ತಾನೆ ಉತ್ತರಿಸದು
ಎಲ್ಲಿ ಕಾರ್‍ಯ ಕಾರಣ
*****