ಎಷ್ಟು ಹೊರಳಿದರು ಮುಗಿಯದಂಥ
ನೆನಪಿನ ತೆರೆಯೊಂದು
ಮರಳಿ ಮರಳಿ ಹಾಯ್ವುದು
ಕಾರಣವಿರದೆ ಏನೇನೊ ತರುವುದು
ಏನೇನೊ ಕೊಂಡು ತೆರಳುವುದು
ಜನರ ನಡುವೆ ನಾನಿರುವ ಕಾಲ
ಏಕಾಂತದಲ್ಲಿ ಕೂತಿರುವ ಕಾಲ
ಏನೊ ವಿಷಯದಲಿ ಮಗ್ನನಾಗಿರುವ ಕಾಲ
ಸಂಜೆ ಬಣ್ಣವ ನೋಡುತ್ತಿರುವ ಕಾಲ
ನದಿಯಲ್ಲಿ ನೆರೆ ಬರುವ ಕಾಲ
ಕರಿ ಮುಗಿಲು ಆವರಿಸುವ ಕಾಲ
ಹಕ್ಕಿಗಳು ಗೂಡು ಸೇರುತಿರುವ ಕಾಲ
ನಾನಿದೆಲ್ಲವ ನೋಡಿ ನಿಂತಿರುವ ಕಾಲ
ಯಾವುದೀ ತರಂಗ ಎಲ್ಲಿಂದ ಬರುವುದೊ ಏನೊ
ಇನ್ನೆಲ್ಲಿ ಹೋಗಿ ಸೇರುವುದೊ
ನನ್ನೊಳಗೇ ಇರುವುದೊ ಹೊರಗೇನೊ ಹುಡುಕುವುದೊ
ಸ್ವಾಗತಿಸದೇ ಬರುವ ಇದು ನನ್ನ ಗತವೊ
ನೋವ ತರುವುದೊ ಸಂತೋಷ ಕರೆವುದೊ
ನಾ ತಿಳಿಯಲಾರೆನಲ್ಲ
ಎಲ್ಲ ಭಾವಗಳ ಮೀರಿದಂಥೊಂದು ಸೀಮೆಗದು
ಒಯ್ದೆನ್ನ ಬಿಡುವುದಲ್ಲ
ಪ್ರತಿಯೊಂದು ಸಲವು ನಾ ಮತ್ತೆ ಬಿದ್ದಂತೆ
ವಾಸ್ತವದ ನೆಲದ ಮೇಲೆ
ಮೈನವಿರೊ ಗಾಯವೊ ಏನಿದೇನಿದು ಮಾಯ
ಕ್ಷಣವೊಂದು ನಿಂತು ಕಾಲವನೆ ತಡೆದ ಹಾಗೆ
*****


















