ಬೆವರಿಳಿಯುತ್ತಿರುವ ಮುಖ, ಕಳೆಗುಂದಿದ ಕಣ್ಣು
ಬಾಡಿ ಬಸವಳಿದ ಹೆಣ್ಣು
ಚಿಂದಿ ಆಯ್ವ ಕೈಗಳು, ನಡೆದು ದಣಿದ ಕಾಲು
ಆಹಾರಕ್ಕಾಗಿ ಕಾದ ಒಡಲು
ಗುರುವಿಲ್ಲ ಹಿಂದೆ; ಗುರಿಯಿಲ್ಲ ಮುಂದೆ
ಕಳೆದುಹೋಗುತ್ತಿರುವ ಬಾಲ್ಯ
ಚಿಂದಿಯ ಪ್ರಪಂಚದಲ್ಲೇ ಬಂಧಿ
ಅಲ್ಲೇ ನಾಂದಿ; ಅಲ್ಲೇ ಅಂತ್ಯ
ಮನದಲ್ಲಿ ಚಿಗುರಿದೆ ಆಶಾಲತೆ
ಬೆಳೆಸಲಾಗದ ಅಸಹಾಯಕತೆ
ಕಂಡ ಕನಸು ಈಡೇರದೆಂದು
ಮರೆತೇ ಬಿಟ್ಟಿದ್ದಾಳೆ ಕನಸು ಕಾಣುವುದನ್ನು
ಮಣ್ಣು ಮೆತ್ತಿಕೊಂಡ ಬಟ್ಟೆ
ಇನ್ನೂ ತುಂಬದ ಖಾಲಿ ಹೊಟ್ಟೆ
ನೆತ್ತಿ ಮೇಲೆ ಸುಡುತ್ತಿರುವ ಸೂರ್ಯ
ಹೊಟ್ಟೆಯೊಳಗೆ ಹಸಿವಿನ ಉರಿ
ತುತ್ತು ಅನ್ನದ ಆಸೆ
ಕಾಗದದ ಹೂವಿನಂತಹ ಜೀವನ
ಚಿಂದಿ ಆಯ್ವ ಹುಡುಗಿಯ ಬಾಳಲ್ಲಿ
ಮೆಹಂದಿಯ ಚಿತ್ತಾರ ಮೂಡಿಸುವವರಿಲ್ಲ.
*****


















