ಕೊಯ್ದು ಮುಗೀದಷ್ಟು ಹೂವಿರಲಿ ಶಿವನೆ
ಮುಡಿದು ಮುಗೀದಷ್ಟು ಮಾಲೆಗಳು
ಉರಿದು ಮುಗೀದಷ್ಟು ಬೆಳಕಿರಲಿ ಶಿವನೆ
ಮಿನುಗಿ ಮುಗೀದಷ್ಟು ತಾರೆಗಳು
ಕೇಳಿ ಮುಗಿಯದಷ್ಟು ಕತೆಯಿರಲಿ ಶಿವನೆ
ಹೇಳಿ ಮುಗಿಯದಷ್ಟು ಸುದ್ದಿಗಳು
ಹಾಡಿ ಮುಗೀದಷ್ಟು ಹಾಡಿರಲಿ ಶಿವನೆ
ಆಡಿ ಮುಗೀದಷ್ಟು ಆಟಗಳು
ನಡೆದು ಮುಗೀದಷ್ಟು ದೂರವಿರಲಿ ಶಿವನೆ
ತಂಗಿ ಮುಗೀದಷ್ಟು ತಾಣಗಳು
ನೋಡಿ ಮುಗೀದಷ್ಟು ಮುಗಿಲಿರಲಿ ಶಿವನೆ
ಕಂಡು ಮುಗೀದಷ್ಟು ದಿಗಿಲುಗಳು
ಬದುಕಿ ಮುಗೀದಷ್ಟು ಬಾಳುವೆಯಿರಲಿ ಶಿವನೆ
ಉತ್ತರಿಸಿ ಮುಗೀದಷ್ಟು ಪ್ರಶ್ನೆಗಳು
*****