ಮುಚ್ ನಿನ್ನ್ ಬಾಯಿ! ಏ ಬೇವಾರ್‍ಸಿ!
ಬಗವಂತ್ನ್ ಎಸರು ನಮಗೆ ತಾರ್‍ಸಿ!
ಇಲ್ದಿದ್ನೆಲ್ಲ ವುಟ್ಟೀಸ್ಕೊಂಡಿ
ಏಕ್ ಸುಂಕ ಕೂಗ್ತಿ ಕಾಲಿ?
ನಮಗೆ ದೇವು, ಯೆಂಗೌನೇಂದ್ರೆ
ಮುತ್ತೈದೇಗೆ ತಾಲಿ! ೧

ದೇವ್ರ್ ಇಲ್ಲಾಂತ ಯೋಳ್ದ್ರೆ ನೀನು
ದೇವ್ರ್ ಔನೇಂತ ಯೋಳ್ತೀನ್ ನಾನು!
ಮಡಿಕೇಲ್ ತುಂಬಿದ್ ಯೆಂಡ ತನ್ಗೆ
ಸಿಕ್ದೆ ವೋದ್ರೆ ಸೋತು
ಪರ್‍ಪಂಚ್ದಲ್ಲೇ ಯೆಂಡಿಲ್ಲಾಂದ್ರೆ
ಆದಾ ಸಾಜ ಮಾತು! ೨

ನನಗೇನ್ ಬೇಡ ನಿನ್ ಬುದ್ವಾದ!
ನಂಗೂ ನಿಂಗೂ ಬಾಳ ಬೇದ!
ನಂ ತಾಪತ್ರೇನ್ ಮುಳಗಿಸ್ತೈತೆ
ಬಗವಂತ್ನ್ ಎಸರಿನ್ ಸಕ್ತಿ!
ಅದಕೇ ನಮಗೆ ಬಗವಂತ್ನ್ ಎಸರು
ಅಂದ್ರ್ ಆಪಾಟಿ ಬಕ್ತಿ! ೩

ದೇವ್ರ್ ಔನಂತೆ! ದೇವ್ರ್ ಇಲ್ವಂತೆ!
ಯೋಳಾರ್ ಯೋಳ್ಲಿ- ಅದಕೇನಂತೆ?
ದೇವ್ರ್ ಔನ್ ಅಂತ ನೆಂಕೊಳ್ಳಾದು
ನಮಗೆ ಜೀವ-ಉಸರು!
ಔನಲ್ ನೆಮ್ಕೆ ಮಡಿಕ್ಕೊಳ್ಳಾದು
ನಮಗೆ ನೆಮ್ದ ನಸರು! ೪
*****