ಹುಲ್ಗರಿಯ ಬಳವಿಗೆಯ ಬಿಗಿದುಸಿರೊಳಾಲಿಸುತ
ಮೇಲೆ ಬಾಂದಳದಾಳವಳೆಯೆ ಹವಣಿಸುತ
ಶ್ವಾಸನಿಶ್ವಾಸದೊಳು ಒಳಹೊಕ್ಕು ಹೊರಬರುತ
ಲೋಮದೊಳು ರಕ್ತ ಕಣದೊಡನೆ ಪಯಣಿಸುತ
ತನ್ನ ಮೈ ಮೊದಲಾಗಿ ಜಗದೆಲ್ಲ ಕಾರ್ಯಗಳು
ತನಗೆ ಹೊರತಾಗಿಯೇ ಜರಗುವುದ ಕಂಡು
ಈ ದಿವ್ಯ ಸಂಭ್ರಮದಿ ತಾನನಾಹೊತನೆನೆ
ಇಲ್ಲಿ ತಾನಾರೆಂದು ಬಹುಖೇದಗೊಂಡು
ಸೃಷ್ಟಿಯನ್ಯತೆ ತರುವ ಸ್ವಾತ್ಮಾನುಕಂಪೆಯೊಳು ಕೊರಗುತಿರುವೆಲೆ ಅಹಂಭಾವ,
ನಿನ್ನ ಪರಿವೆಯೆ ಇಲ್ಲದಂದದೊಳು ತೊಲಗುತಿಹುದಿಲ್ಲಲಾ ನಿನ್ನ ಹೇವ!
*****


















