ಒಂದರ ಹಿಂದೊಂದು ಸರಣಿ ಸ್ಫೋಟ
ಜನಸಂದಣಿ, ಸಂತೆ, ಆಸ್ಪತ್ರೆಗಳಲ್ಲಿ
ಉಗ್ರನೊ, ವ್ಯಾಗ್ರನೊ ಕಾಣದ ಕೈ
ಅನ್ಯ ಧರ್ಮ ಸಹಿಸದ ಸಿನಿಕ
ದ್ವೇಷ ರಾಜಕೀಯದ ಕೈಗೊಂಬೆ
ಕೊಲ್ಲುತ್ತ ಅಮಾಯಕರ
ನೆರೆಮನೆಗೆ ಬೆಂಕಿಯಿಡುವವನ
ಮನೆ ಹೇಗೆ ತಾನೆ ಸುರಕ್ಷಿತ?
ಆ ಮನೆಯ ಬೆಂಕಿ ತಗುಲಿದಾಗ
ಉಳಿಸಲು ಯಾರೂ ಉಳಿಯುವರು
ಈ ಪುಣ್ಯ ಭೂಮಿಯ ಮೇಲೆ.
ಓಟು ಸಿಕ್ಕಾವು ಅವರಿಗಿಷ್ಟು ಇವರಿಗಿಷ್ಟು.
ಭೂತ ಪ್ರೇತಗಳದೇ ಸಾಮ್ರಾಜ್ಯವಿಲ್ಲಿ
ಆಸ್ಪತ್ರೆಯಲಿ ಅರೆಬೆಂದ ಶವಯಾತ್ರೆ
ಮುಗಿಲು ಮುಟ್ಟಿದೆ ಆಕ್ರಂದನ
ಎಲ್ಲಿ ಹುಡುಕಲಿ ನಾನು ಮಾನವನ?
ಮನುಕುಲದ ಶತ್ರು ನೀನು.
ನೆಮ್ಮದಿಯ ಸಾವು ನಿನಗೂ ದಕ್ಕದು
ರಾಜಕೀಯದ ಬೆಂಕಿಯಿದೆ ಅಲ್ಲಿ
ನಾಳೆ ಇಲ್ಲಿಯೂ ತಗಲುತ್ತದೆ
ಸುಂದರ ಕನಸುಗಳ ಭಸ್ಮ ಹೊತ್ತು
ಸುಭದ್ರ ತಾಣ ಎಲ್ಲಿ ಹುಡುಕುವೆ?
ಧರೆಯೇ ಹತ್ತಿ ಉರಿಯುತ್ತಿರುವಾಗ
ಬದುಕು ಎಲ್ಲಿ ಅರಸುವೆ?
ಜೀವ ಹೆಕ್ಕುವ ರಕ್ಕಸ
ಸ್ವಲ್ಪ ಸ್ವಲ್ಪವೇ ಸಾಯುವಾಗ
ಮನುಷ್ಯ ಮುಗುಳ್ನಗುತ್ತಾನೆ
ಭೂಮಿಯ ಮೇಲೆ ಮತ್ತೇ
ಜೀವರಾಶಿ ಸಂಚಲಿಸುತ್ತದೆ.
ವಿನಾಶದಂಚಿನಿಂದ ಹೊರಬಂದ
ಜೀವಕೋಶಗಳು ಮತ್ತೇ ಉಸಿರಾಡುತ್ತವೆ.
ಕೊಲ್ಲುವ ಕೈ ಕೆಲವಾದರೆ
ಬದುಕಿಸುವ ಕೈಗಳು ಸಾವಿರಾರು.
*****