ನನ್ನ ಜುಟ್ಟನದಾರು ಮೆಚ್ಚರು ನೋಡು ನೋಡಿದರಾವುಟ
ನನ್ನ ನೇಹಿಗರೆಲ್ಲರಚ್ಚರಿ ನನ್ನ ತಲೆಯೇ ಬಾವುಟ.
‘ಭಟ್ಟವಂಶದಿ ಹುಟ್ಟ ಪಡೆದುದು ಸಾರ್ಥವೆನಿಸಿದನೀ ಭಟ
ಮ್ಲೇಚ್ಛರಿದಿರೊಳು ಸ್ವೇಚ್ಛೆಯಿಂದಲಿ ಮತವ ಮೆರೆದಿಹನೇಹಟ!’
ಎಂದು ಮುತ್ತಣ್ಣಾದಿ ಮುಖ್ಯರು ನನ್ನ ಹೊಗಳುವ ತೆರದೊಳು
ಟೋಪಿ ಪೇಟವ ತೊರೆದು ಪಿಳ್ಳನೆ ಜುಟ್ಟ ತೋರುವೆ ಊರೊಳು.
ಜುಟ್ಟನಿಟ್ಟಿಹ ಮಂದಿಯೇ ಹೆಚ್ಚೆಮ್ಮ ಹೆಮ್ಮೆಯ ಪುರದೊಳು
ಹೆಂಗಸರ ಕೈಚಳಕ ಮೆರೆವುದು ಗಂಡಸರ ಸಿರಿಮುಡಿಯೊಳು.
ನೆತ್ತಿಮೇಲೆತ್ತಿರುವ ಮಕುಟವ ಹೋಲುವಂತಹ ಮುಡಿಗಳು,
ಸೋರುಮುಡಿಗಳು, ಜೋರುಮುಡಿ, ಬಾದಾಮಿಬೊಂಬಯಿಮುಡಿಗಳು,
ಕಿವಿಯ ಕುರುಳಿನ, ನಿರಿಯ ಬೆಡಗಿನ, ಮಲರ ಸೊಗಸಿನ ಮುಡಿಗಳು,
ಬಿಚ್ಚಲಾಗದ ಮುಡಿಗಳು, ಬಲು ಮುಟ್ಟಿ ನೋಡುವ ಮುಡಿಗಳು,
ತಗ್ಗಿ ನಡೆಯವ ಕುಲವಧೂಜನ ಪತಿಯ ಜಗ್ಗಿಸಿ ಕಿರಿಚಿಸಿ
ನಗುತ ನಿಸ್ಸಂಕೋಚ ಬಾಚುವ ಸರಸಕಿವೆ ತವರೆನ್ನಿ ಸಿ
ಮೆರೆವುದೆಮ್ಮಯ ಪುರದಿ-ಉಹು ಉಹು-ಮೆರೆದುವೆಂಬುದೆ ನನ್ನಿ ಯು;
ನೆವಕೆ ಜುಟ್ಟಿದೆ ಜನಕೆ ಈಗಳು, ಸಿಂಗರಕೆ ಬರಿ ಸೊನ್ನೆ ಯು!
ಹೊಟ್ಟೆಗೇ ಹಿಟ್ಟಿಲ್ಲವಾಗಿರೆ ಜುಟ್ಟಿಗೇತಕೆ ಮಲ್ಲಿಗೆ
ಎಂಬ ವೈರಾಗ್ಯದೊಳು ನಲುಗುತ ಸಮವಿದಾಗಿದೆ ಹುಲ್ಲಿಗೆ.
ತೈಲ ಬಾಚಣಿಗೆಗಳ ಕಾಣದೆ ಬೆರಲ ತಳಿರೊಡನಾಡದೆ
ನಲ್ಲೆಯರ ಸವಿಲಲ್ಲೆಯಾಲಿಸಿ ಲಲಿತಬಂಧದಿ ಕೂಡದೆ
ಸೊರಗಿಹೋಗಿದೆ ಬಹಳ ತಲೆಯೊಳು-ನನ್ನ ತಲೆಯೊಳಮಿಂತೆಯೇ
ಪತಿಗೆ ಪತ್ನಿಯ ಲಕ್ಷ್ಯ ತಪ್ಪುವ ಅಳತೆ ಇದೊ ಎನುವಂತೆಯೇ.
ಮರುಗಲೇಕವರಿವರ ಜುಟ್ಟಿನ ಪಾಡ ನೆನೆದಾನೀ ತೆರ
ನನ್ನ ತಲೆಗೂದಲಿನ ಚರಿತೆಗೆ ನನ್ನ ಮಸಿಮಿಗಲದೆ ತರ.
ಶಿಖಾರಂಭಣ ಚೌಲಕರ್ಮದ ವೆಚ್ಚದಿಂ ಬೆಲೆಯಾಯಿತು
ವರ ಸನಾತನ ಧರ್ಮರಕ್ಷೆಗೆ ಮಂಡೆಗದ್ದುಗೆಯೇರಿತು.
ಪರಸ್ಥಳದೊಳು ಎಣ್ಣೆ ಸೀಗೆಯ ವೆಚ್ಚ ಹೆಚ್ಚಲು ತಗ್ಗಿತು
ಆಂಗ್ಲ ವಿದ್ಯೆಗಳೊಳಗೆ ಬೆಳೆದಂತಿದರ ವರ್ತುಳ ಕುಗ್ಗಿತು
ಟೋಪಿ ಹೊರಗಡೆ ತೋರಲಂಜುತ ಟೋಪಿಯೊಳಗಡೆ ನುಗ್ಗಿತು
ಕ್ಷೌರ ಕ್ಷೌರಕು ಇದರ ಪಾಳೆಯಪಟ್ಟಿನೆಲ್ಲೆ ಯೆ ಮಗ್ಗಿತು.
ಮೊಗಲಿರಿದಿರು ಪ್ರತಾಪನಂದದಿ ತಲೆಯರಾವಳಿ ಮಲೆಯೊಳು
ಹದುಗಿ ಕೃಶಕೃಶವಾಗುತಾದರು ಮೂರ್ಖಗೊಪ್ಪುವ ಧೃತಿಯೊಳು
ಪರರ ವಿಶ್ವಾಕ್ರಮಣ ಸಂಸ್ಕೃತಿ ದಾಳಿಯೆದುರಿಸಿ ನಿಂತಿದೆ
ಗೆಲವ ಕಾಣದೆ ಸೋಲನೊಲ್ಲದೆ ತಲೆಯ ಸಿಟ್ಟುಸಿರಂತಿದೆ.
ಕಚ್ಚೆ ಪಂಚೆಯನುಟ್ಟು ಮೈ ಮೇಲುತ್ತರೀಯವ ಹೊದ್ದಿರೆ
ಕೆನ್ನೆ ಗಡ್ಡದ ಕುರುಚುಕಾಡಿನ ಮೇಡಿನೋಲು ಮುಡಿಯದ್ದಿರೆ
ಜುಟ್ಟರೂರೊಳು ಜುಟ್ಟ ಮೆರಸುವ ಹಿತಕು ಮಿಕ್ಕಿನದೇನಿದೆ?
ಮುಂಗುರಳ ಸೀಮಂತರೂರೊಳೊ ಜುಟ್ಟೆ ಹರಿಜನವಾಗಿದೆ.
ಹಿಂದಿನಿಂ ಮುಂದೋಡಿತೇತಕೆ ನಮ್ಮ ಯುವಕರ ಕೂದಲು
ಎಂದು ಸೋಜಿಗಗೊಂಡು ಚಿಂತಿಪೆ, ಬಿಡಿಸದೊಗಟಿದು ಈಗಳೂ!
ಹೆಣ್ಣ ಮೇಲಧಿಕಾರ ತಪ್ಪಲು ಗಂಡಿಗೀ ಕುರುಹಾಯಿತೋ
ಹಿಂಜುಟ್ಟ ಜಗ್ಗಾಟದುಪಟಲಕಿಂತ ಇದೆ ಮೇಲಾಯಿತೋ?
ನುಣ್ಕಪೋಲದ ನಾಸ್ತಿಮೀಸೆಯ ವಾಮಕೇಶದ ರಂಜನ
ಉತ್ತಮಾರ್ಧದ ಉತ್ತಮಿಕೆಯನೆ ಮೆರಸಲೆಂದೋ?-ಕಾಣೆ ನಾ.
ಅದಕೆ ಕುರುಳಿರದವನ ಮೆಚ್ಚುವ ವಧುಗಳಿಲ್ಲೀ ಕಾಲದಿ
ತಮ್ಮ ಶ್ರೇಷ್ಠತೆಯೊಪ್ಪಿಕೊಂಬರ ಕಾಣುತೀ ಅನುಕರಣದಿ.
ಇಂದು ಹಿಂಗೂದಲಿನ ಮಂದನ ಮಡದಿಗೆಲ್ಲರ ಕನಿಕರ
ಮುಡಿಯನೊಪ್ಪಿಸುವನಕ ಆಕೆಗು ಈತನಾಗನು ಹಿತಕರ.
ನೋಡಿರೈ, ದೊರೆಸಾಮಿ ಹೆಂಡತಿ, ನಳಿನಿ, ಏ ಪರಿ ಗಂಡನ
ನಮ್ಮಿದಿರೆ ದಟ್ಟಿಸುತಲಿರುವಳು! ಇಂಥ ಸರಸದ ದಂಡನ
ಜುಟ್ಟುಳ ನಮಗಿಲ್ಲವೆನ್ನುತ ಒಮ್ಮೆಗೊಮ್ಮೆಗೆ ಕೊರಗುವೆ
ಶುಷ್ಕವ್ರತವಿದ ಪಾಲಿಸುತ ಬಾಳ ವ್ಯರ್ಥವಾಯಿತು ಎನ್ನುವೆ.
ಇಂದು, ಮುಡಿಯುಳ್ಳವನಿಗಾವನು ನಡೆವನಂಜುತ ಪೇಳಿರೈ
ಆಂಗ್ಲ ಅಮೆರಿಕ ರಷ್ಯ ರಾಜ್ಯದಿ ಜುಟ್ಟರಿಹರೇ ಪೇಳಿರೈ
ಲೋಕನಾಯಕರಿವರ ತೇಜವ ಹೊಳೆಸುವೆಲ್ಲರ ತಲೆಯೊಳು
ಮುಡಿಯ ಕಾಂಬಿರ? ಎಡರಿದಲ್ಲದೆ ಪ್ರತಿಫಲನಸತ್ಕಲೆಯೊಳು?
ಶಕ್ತಿಸೂರ್ಯನ ಗ್ರಹಗಳಾಗುವ ಬಯಕೆಯುಳ್ಳವರೆಲ್ಲರೂ
ಜುಟ್ಟುಕೇತುವನೊತ್ತಿ ಕಳೆಯಿರಿ-ಎನ್ನು ವಾಹನಮಲ್ಲರು
ತೋರ್ಕೆಯಿಂದಲೆ ಲೋಕಕಭಯವನೀವ ಜುಟ್ಟಿನ ಮಹಿಮೆಯ
ತಿಳಿದು ತಲೆಯೊಳು ಮೆರಸಬಾರದೆ ಅಂತೆ ಶಾಂತಿಯ ಗರಿಮೆಯ
ಆದೊಡಯ್ಯೋ ಕಡಲ ದಾಟರು ಜುಟ್ಟನುಳ್ಳವರಾಳರು
ಜುಟ್ಟನುಳ್ಳರು ನಲ್ಲರಾಗರು ಜುಟ್ಟರನು ಜನವೊಲ್ಲರು
ಜುಟ್ಟನುಳ್ಳರು ಪಟ್ಟಣದಿ ತಲೆ ಮುಚ್ಚಿಕೊಂಡೇ ನಡೆವರು
ಬುಟ್ಟಿಯೊಳಗದನಿಟ್ಟು ದುರುದುರುದಿಟ್ಟಿಯಿಂ ಕಾಪಿಡುವರು.
ಜುಟ್ಟನಿಟ್ಟನಗಿಷ್ಟು ಕಷ್ಟಗಳಿದ್ದರೂ ಜುಟ್ಟೇತಕೆ?
ಈಗ ಹೊಳೆವೀ ಗುಟ್ಟ ಕೇಳಿರಿ: ಅದುವೆ ನಿರ್ಭಯಮಾತೃಕೆ.
ಅದನು ಬಿಟ್ಟಿಹ ತಲೆಯು ಮುಟ್ಟದು ಎಂಥ ಇಸಮೇ ಆಗಲಿ
ಸೋಷಲಿಸಮೋ ಕಮ್ಯುನಿಸಮೋ ಬಹದುರ್ ಇಸಮೇ ಆಗಲಿ.
ಪರಜ್ವರಗಳಿಗೆಲ್ಲ ತಡೆಯನು ಕಟ್ಟಲಿದುವೇ ಯಂತ್ರವೈ
ಪಶ್ಚಿಮದ ಚಾಪಲ್ಯಪಾತವ ತಪ್ಪಿಸಲು ಇದೆ ತಂತ್ರವೈ.
“ಹಳತರೊಲವೂ ಹಳ್ಳಿಯೊಲವೂ ಸೊಳ್ಳೆ ಕಳ್ಳಿಯೊಳೆಂತೆಯೋ
ಅಂತೆ ನಿಮ್ಮಾ ಜುಟ್ಟಿನೊಳಗೂ ಅಂಟಿಕೊಂಡಿಹವೆಂತೆಯೋ”
ಎನ್ನು ವೀ ದೊರೆಸಾಮಿಯಂಥರ ನಗೆಗು ಇದು ಬಲು ಬಲ್ಲಿತೈ
ಶಿವಗೆ ಗರವೆಂತಂತೆ ನಮಗೀ ಶಿರೋಭೂಷಣವೊಳ್ಳಿತೈ.
ಜಗದ ಸಂಸ್ಕೃತಿಯೆಲ್ಲ ನಮ್ಮಯ ಮಾತೃಸಂಸ್ಕೃತಿ ಜಠರದಿ
ಜೀರ್ಣವಾಗುತ ಆತ್ಮ ಪುಷ್ಟಿಗೆ ರಸವನೊದಗಿಪ ಮಾಟದಿ
ಬುದ್ದಿ ಗೊದಗುವ ಪಾಚನಾಗ್ನಿ ಯ ಧೂಮವೆನಿಸುವ ಲೇಸಿದೈ
ಇದನು ನೇವರಿಸುತ್ತಲಿರೆ ನಾನೆನ್ನ ಪ್ರತಿಭೆಯು ಮಾಸದೈ.
ನಮ್ಮ ದೇಶ ವಿಮುಕ್ತವಾಗುವ ವೇಳೆಗಾನೀ ಜುಟ್ಟನೇ
ಮುಡುಪನೊಪ್ಪಿಸೆ ಸಿದ್ಧನಾಗಿಹೆ. ನನ್ನ ಬಿಡಿ; ಮುತ್ತಣ್ಣನೇ
ಕ್ಷೌರಕನ ಕರೆದಿಂತು ಹೇಳಿರೆ, ಎಂಥ ಹಂಬಲು ಅವಗಿದು!
ಆ ಸುದಿನ ಬರುವನಕ ನಮ್ಮೀ ತಲೆಯ ಬಾವುಟವಿಳಿಯದು!
*****