ಅಂಗುಲ ಹುಳವೊಂದು ತನ್ನ ಬದುಕ
ಅಂಗುಲ ಅಂಗುಲ ಅಳೆಯುತಿದೆ
ಯಾವುದೊ ಸಿಹಿಯೆಲೆಯಾಸೆ
ಯಾವುದೊ ಇಬ್ಬನಿ ಬಯಕೆ
ಈ ಹುಳವಿನ ತಲೆಯೊಳ ಹೊಕ್ಕು
ಹರೆಯುಸಿತಿದೆ ತೆವಳಿಸುತಿದೆ
ದಾರಿ ಸಾಗುವುದಿದೆ ಬಹಳ ದೂರ
ಪಕ್ಕದಲೇ ಒಂದು ಕಾಗೆ
ಎಡ ತಲೆಬಾಗಿಸಿ ಬಲ ತಲೆಬಾಗಿಸಿ
ತನ್ನ ಕೊಕ್ಕನು ಮೊನೆಮಾಡಿಕೊಳ್ಳುತಿದೆ
ಆಗಲೆ ಅದರ ರೆಕ್ಕೆಗಳೂ ಸಹ
ಎರಗಲು ತಯಾರಾಗುತಿವೆ
ಸಂಗಾತಿಯ ದನಿ ಕೇಳಿ ಹೊರಟ ಒಂದು ಕೀಟ
ತನ್ನ ಬೇಟ ಹುಡುಕುತ್ತಿದೆ ಊಟ ಹುಡುಕುತ್ತಿದೆ
ಈ ಹೂವು ಒಳ್ಳೆದೊ ಆ ಹೂವು ಒಳ್ಳೆದೊ
ಎಂದು ಅಲ್ಲಲ್ಲಿ ಸವಿದು ನೋಡುತಿದೆ
ಸಮೀಪದಲ್ಲೆ ಒಂದು ಮಾರ್‍ಜಾಲ
ತನ್ನುಗುರನೊಳಕ್ಕೆಳೆದು ಮೆಲ್ಲ
ಹೆಜ್ಜೆ ಹಾಕುತಿದೆ ಸದ್ದು ಮಾಡದೆಯೆ
ಏನದರ ಏಕಾಗ್ರ ಏನದರ ಸಾಧನೆ
ಸೆಟೆದು ಮೈ ಬಿಲ್ಲು ಬಾಣ
ಗುರಿ ಸೇರುವ ತನಕ
ಅಂತೆಯೇ ಒಂದು ಜೇಡ
ಅಂತೆಯೇ ಒಂದು ಹಲ್ಲಿ ಕೂಡ
ಅಂತೆಯೇ ಇಡಿ ಜೀವಜಾಲ
ಬ್ರಹ್ಮ ಬಗೆದ ಸಂಗೀತ ಮೇಳ
ತಂತಿಗಳು ಎಷ್ಟೊ ತಾಳಗಳು ಎಷ್ಟೊ
ಮಿಡಿವ ಹೃದಯಗಳೆಷ್ಟೊ
ತುಡಿವ ರಾಗಗಳೆಷ್ಟೊ
ಕೊಂದು ಕೂಗವೇ ಜೀವಗಳ
*****