ಇಲ್ಲಿ ಬುದ್ಧಿಯಿದೆ ನಿಜ
ಹೃದಯವೇ ಮಾಯವಾಗಿದೆಯಲ್ಲ?
ಬದುಕಿನ ಅನೇಕ ತಿರುವುಗಳಲ್ಲಿ
ಪೆಟ್ಟು ತಿಂದರೂ ನಾನೇ ಬದಲಾಗಲಿಲ್ಲವಲ್ಲ?
ಆಕಾಶದ ಬಟ್ಟೆಯಲಿ ತೂತುಗಳೇ ಇಲ್ಲ
ಆದರೆ ಹೃದಯದಲ್ಲಿ ತೂತು ಬಿದ್ದಿದೆ.
ಸರಿಪಡಿಸಿ, ಕೃತಕ ಉಸಿರಾಟಕ್ಕೆ
ನಳಿಕೆ ಅಳವಡಿಸಿದೆ ನೋಡು!

ಅಜ್ಜಿ ಕತೆಹೇಳುವ ಕಟ್ಟೆಯ
ಕಲ್ಲು ಬಿದ್ದು ಹೋಯಿತು ನಿಜ
ಹೃದಯಗಳೇ ಏಕೆ ಸ್ಪಂದಿಸುತ್ತಿಲ್ಲ?
ಗುಬ್ಬಿಗಳು ಒಣಗಿದ ಮರಬಿಟ್ಟು
ಹಸಿರಿರುವತ್ತ ಹಾರಿಹೋಗಿವೆ ನೋಡು!
ಒಂಟಿ ಜೀವನದ ಕೊಂಡಿಗಳು
ಕಳಚಿಕೊಂಡಿವೆ ಬೆಸುಗೆ, ಹೊಲಿಗೆ, ಜೋಡಣೆ
ಹೃದಯದಲಿ ಹೊಲು ಬಿದ್ದಿದೆ ನೋಡು!
ಯಾಕೋ ಹೃದಯದ ನಾಡಿಗಳು
ಪರಸ್ಪರ ಸ್ಪಂದಿಸುತ್ತಿಲ್ಲ ನೋಡು!
ಬದುಕಿನ ಯಾವುದೋ ತಿರುವಿನಲಿ
ಬೆಸುಗೆ ಕಡಿದು ರಕ್ತಸಿಕ್ತವಾಗಿದೆ
ಹೃದಯದ ನಳಿಕೆಗೆ ಮತ್ತೇ
ಹೊಲಿದು ಸರಿಪಡಿಸಿದೆ ನೋಡು!
ಕವಾಟಕೆ ಕಟ್ಟಬಹುದು ಗೋಡೆಗಳನು
ಮಿಡಿಯುವ ಮನದ ಭಾವಗಳನು
ಅಡ್ಡಗೋಡೆಗಳು ತಡೆಯಲಾರವು ನೋಡು!

ಹೃದಯ ರಕ್ತ ಪಂಪು ಮಾಡುತ್ತದೆ
ಅದಕ್ಕೆ ಅದರದೇ ವೈಜ್ಞಾನಿಕ ಕಾರಣವುಂಟು
ಭಾವಗಳ ಹೊದಲು ಎಲ್ಲಿಂದ ಹೊಮ್ಮುತ್ತವೆ?
ಪತ್ತೆ ಮಾಡಲಿ ಹೇಗೆ
ಹೇಗೆ ಹಿಡಿದಿಡಲಿ ಮಾದ್ಯಮದಲಿ
*****