“ಮಾತಾ ಸರ್ವಸ್ಯ ಲೋಕಸ್ಯ ಮಧುಸೂಧನಮಾನಿನೀ
ದರ್ವೀಮಾದಾಯ ಬಾಲಸ್ಯ ದದೌ ಭಿಕ್ಷಾಂ ಗೃಹೇ ಗೃಹೇ”
(ಯಾದವಗಿರಿ ಮಾಹಾತ್ಮ್ಯ)

“ಭವತಿ ಬಿಚಾಂದೇವಿ”ಯೆಂದು
ನಮ್ಮ ಮನೆಯ ಹೊಸಿಲ ಮುಂದು
ದಂಡಕೋಲುಛತ್ರಿ ಹಿಡಿದು
ಮನೆಯೊಡತಿಯ ತೊದಲಿ ಕರೆದು
ಕಾಡಿಗೆ ಕಪ್ಪಿಡಿದ ಕಣ್ಣ
ಪಿಳಪಿಳ್ಳನೆ ಬಿಡುವ ಚಿಣ್ಣ-
ನಾರು? ಆರ ಮನೆಯ ಕಣ್ಣ?
ಕೆನ್ನೆ ಯೊಳರಿಸಿನದ ಬಣ್ಣ
ಹೆಣ್ಣಿಗಿಂತಲಂದಮಾಗೆ
ಜಡೆಗೆ ಕುಚ್ಚಿನೊಡವೆ ತೂಗೆ
ಚರಿಯ ಮಗುಟ ನಡುವಿನೊಳಗೆ
ಜಾರುತಿರಲು ಹೆಜ್ಜೆ ಮುಳುಗೆ
ಪಾತ್ರೆ ಹಿಡಿದ ಕೈಯೊಳದನು
ಎತ್ತಿಹಿಡಿದು ನಿಂತಿರುವನು,
ಭವದ ತೊಡರನುಡಲಾರದೆ
ಉಡುತಲಿರುವ ಹರಿಯ ತೆರದೆ
*ಜಪಿಸುತ್ತಿರುವ ನನಗೆ ತೋರಿ
ಲಜ್ಜೆ ನಗೆಯ ಮುದ್ದ ಬೀರಿ-
ಅಂದು ಭಿಕ್ಷವೆರೆದ ಹಸುಳೆ
ನನ್ನ ಧ್ಯಾನದೊಳಗೆ ನುಸುಳೆ
ಮನೆಯ ಮನೆಯ ತಾಯಂದಿರು
ಸಿರಿಯ ತೆರದಿ ನಿಲ್ಲಲಿದಿರು
ಕಾಣುತಿಹೆನು ಹಳೆಯ ಕತೆಯ
ಯದುಗಿರಿಯೊಡತಿಯ ಮಮತೆಯ

“ಕೊಳ್ಳು ದೇವ ನೈವೇದ್ಯವ”
ಎಂದು ಒಂದೆ ಮನದೊಳೆರೆವ
ಕಣ್ಣ ಮುಚ್ಚಿ ಕರವ ಮುಗಿವ,
ಜಗದ್ಧರಣಗಾದ ಹಸಿವ
ತನ್ನ ಹಸಿವಿನಿಂದ ಅಳೆವ,
ಮಾಯವಾದ ನೈವೇದ್ಯವ
ಉಂಡನೆಂದೆ ಬಗೆದು ನಲಿವ,
ಉಂಡನೆಂದೆ ತಾಯಿಗುಲಿವ,
ಸುಚರಿತನೆಂಬಾತನಣುಗ
ನನ್ನ ಕಣ್ಣಿಗಾದನೀಗ.

ನಂಬುವಳೆಂತವನ ತಾಯಿ
ತಿಂದಿತೇನೊ ಬೆಕ್ಕು ನಾಯಿ
ಎಂದು ಮನದಿ ನೋವಳವಳು
ತನ್ನಣುಗನ ಬೈವಳವಳು
ಸಂತನ ಸತಿ ಒಡವೆಯವಳು
ಸಿರಿಯ ಕರುಣೆ ಕಾಣದವಳು.
ತನ್ನ ಕಷ್ಟ ಕಾರ್ಪಣ್ಯವೆ
ತನಗೆ ಕೊಡೆಯ ತೆರದೊಳೊದವೆ
ಎಲ್ಲೆಡೆ ಸುರಿವವಳ ದಯವ
ತನ್ನಿರವೊಳು ಕಾಣದಿರುವ
ಭಾಗ್ಯಹೀನೆ ಈ ಸುವ್ರತೆ
ನಾರಣನೆಂಬಿವನ ಮಾತೆ.
ಅವಳಿಗವಳೆ ತಿಳಿಯದವೊಲು
ಅವಳುದರದಿ ಮೂರ್ತಿಸಿದೊಲು
ಸಿರಿನಾರಣರೊಲುಮೆಕಿರಣ
ಜನಿಸಿಹನೀ ನಾರಾಯಣ.
ಬಡತನ ಬರಗಾಲ ಸೇರಿ
ಅವಳ ಬಾಳ ಹಿಂಡಿ ಹೀರಿ
ಆಸೆ ಹೀದೆಯುಳಿಸಿತನ್ನೆ
ಬದುಕಿಹುದೇ ಭಾಗ್ಯವನ್ನೆ,
ದ್ರವಿಡರರಸು ದಾನಿಯೆಂಬ
ಜಸದ ಗುಡುಗು ಊರುತುಂಬ
ಗುಡುಗುತ ಬರಲೀಕೆ ಕೇಳಿ
ಭಂಗ ನೀಗುವಾಸೆ ತಾಳಿ,
ತನ್ನಿಬ್ಬರು ಸುತರ ಜತೆಗೆ
ಪತಿಯನಟ್ಟಿ ಅತ್ತಕಡೆಗೆ
ಅಂತೊ ಎಂತೊ ಜೀವಿಸಿಹಳು
ಕಿರಿಯಣುಗನ ಪೋಷಿಸಿಹಳು.
ದೊರೆಯ ಸಮಯ ಕಾಯ್ವ ಕಷ್ಟ
ಅವನ ಕಂಡು ನುಡಿವ ಕಷ್ಟ
ನೀನೆ ದೇವರೆಂಬ ಕಷ್ಟ
ಭಕ್ತಗಂಡಗೆನಿತನಿಷ್ಟ
ಎಂದೂಹಿಸಲಾರಳಿವಳು;
ತರುವ ಸಿರಿಯ ಕನಸೊಳಿಹಳು.
ಇಂತು ತಿರಿದುತಂದ ಹಣವ
ಹಾದಿ ಕಳ್ಳರೊಯ್ದ ಹದವ-
ನರಿಯಳೀಕೆ-ಇಂದು ಸುತನ
ಹಸಿವ ತಣಿಸಲಾರದವನ
ಕೈಗೆ ಬಿಕ್ಕೆ ಕುಕ್ಕೆಯಿತ್ತು
`ತಿರುಪೆ ಎತ್ತು’ ಎಂಬಳತ್ತು.

ಕಲ್ಲ ದೇವರುಂಬುದೆಂತು
ಅನ್ನ ವಿತ್ತರುಣ್ಣದೆಂತು
ಉಣ್ಣದಿರಲು ಅನ್ನವೇಕೆ-
ಇಂಥ ಶುಷ್ಕ ತರ್ಕವೇಕೆ?
ಹಸಿವು ತನ್ನ ತಿನ್ನುತಿರಲು
ತಿನಲನ್ನ ಕೈಯೊಳಿರಲು
ದೇವನೈವೇದ್ಯಕಿದನು
ಮೊದಲೊಪ್ಪಿಸೆ ಬಯಪ ಹವಣು
ಹಸುಳೆಗೊದಗುವಚ್ಚರಿಯನು
ಮೆಚ್ಚದಿರುವನಾವನಿಹನು?
ಈ ಸಂಯಮಕೀ ಅರ್ತಿಗೆ
ಅಜ್ಞ ಬಾಲನೀ ಭಕ್ತಿಗೆ
ಅನ್ನ ಹರನು ಒಲಿದನೆನ್ನೆ
ಇದರ ಸುದ್ದಿ ಹರಡಿತೆನ್ನೆ
ಊರ ತಾಯಿ ಮೆಚ್ಚಿದರೆನೆ
ಮೆಚ್ಚು ಹೆಚ್ಚಿ ಹುಚ್ಚಾಯ್ತೆನೆ,
ಎಲ್ಲ ಮನದಿ ಲಕ್ಷ್ಮಿ ಕೂಡಿ
ಎಲ್ಲ ಮನದಿ ಸಿರಿಯೆ ಆಡಿ
ಎಲ್ಲರೆದೆಯ ಲೋಭವಳಿಸಿ
ಇಂದೀವುದೆ ಲಾಭವೆನಿಸಿ,
ತ್ಯಾಗವೊಂದೆ ಭೋಗವಾಗೆ
ವಾತ್ಸಲ್ಯವೆ ರಾಗವಾಗೆ
ಮುತ್ತು ಹವಳ ರತ್ನಗಳನೆ,
ಸುವ್ರತೆ ಏನಚ್ಚರಿ ಎನೆ,
ಬಿಕ್ಕೆಯೆರೆವ ಬಾಲಕನಿಗೆ
ಕೊಟ್ಟರು ಸಂತೋಷಂಮಿಗೆ
ಅವನ ಮೊಗದ ಕಳೆಯ ನೋಡಿ
ನಾರಣನಿವನೆಂದೆಯಾಡಿ.

ಜನದ ಮೊಗದ ಸಿರಿಯ ಕಂಡು
ಜನನಿಗಾದ ನಲವ ಕಂಡು
ಸಿರಿಯೆ ದಾನಗೈವಳೆಂಬ
ಎರೆಯೆ ನಾಚಲೇತಕೆಂಬ
ಬಡವೆಯಾಸೆ ತೀರುವಂತೆ
ಏಳುಬಾರಿ ತಿರಿಯುತಿಂತೆ
ಏಳುಬಾರಿ ಸಿರಿಯ ತಂದು
ಹಸಿವೆಯಿಂದ ಬಳಲಿ ನೊಂದು
ಮತ್ತೆ ಬಿಕ್ಕೆ ಎತ್ತೆ ಬರುವ
ಬಾಲಕನನು ಕಂಡು ನಗುವ
ಹೊನ್ನು ರನ್ನ ತಣಿಸವೆನುವ
ಅನ್ನ ವೆ ಸೈ ತಣಿವಿಗೆನುವ
ಪಂಚಭಕ್ಷ್ಯ ಪರಮಾನ್ನವ
ಲಲ್ಲೆ ಮಾತನಾಡಿ ಕೊಡುವ
ಮಾತೆಯರನು ನಂದಿಸುತ್ತ
ಬಾಲ ಬಂದ ಜನನಿಯತ್ತ.

ಮಿಕ್ಕ ಕತೆಯೊಳೇನಕ್ಕರೆ?-
ರಾತ್ರಿಯೆಲ್ಲ ಎಚ್ಚತ್ತಿರೆ
ನಿಧಿನಾಗರದೊಲು ಸುವ್ರತೆ,
ಬಂದರು ಬದುಕಿದೆನೆನ್ನುತೆ
ಪತಿ ಸುಚರಿತ ಸುತರಿರ್ವರು.
ಕತೆಯೊರೆದೊರ್ವರಿಗೊರ್ವರು
ಅಚ್ಚಚ್ಚರಿಪಡುತೆಲ್ಲರು
ನಾರಣನನು ಮುದ್ದಿಟ್ಟರು.
“ಎಲೆಲೆ ನಮ್ಮ ಮನೋರಥನೆ
ಯದುಗಿರಿಸಿರಿ ಭಗೀರಥನೆ
ನಮ್ಮ ಸುಕೃತಕಲ್ಪತರುವೆ
ಪರಂಧಾಮನನುಗ್ರಹವೆ
ನಮ್ಮಳಲಿನ ಬಿಸಿಲ ಚಂದ್ರ
ನಮ್ಮ ಸೊಗದ ದೇವೇಂದ್ರ,
ಅಂದು ಗಂಗೆಯರಸಿ ಹೋದೆ
ಕಂಗಳಿದಿರೆ ಕಾಣದಾದೆ
ಕೊನೆಗೆ ಇಲ್ಲೆ ಕಂಡೆನವಳ.
ದೊರೆಯಲಿಲ್ಲವೆಂದು ಕವಳ
ದೊರೆಯ ದೊರೆಯ ತಿರಿದೆ ನಾನು
ಇಲ್ಲೆ ಇರಲು ಕಾಮಧೇನು.
ಎನ್ನ ಚಿಣ್ಣ ನಾರಾಯಣ,
ನಮ್ಮಜ್ಞತೆಯನಾವರಣ
ನಿನ್ನಿ ನಾಯ್ತು ಕೃಪಾವರಣ
ಇನ್ನು ನಾ ಅನನ್ಯಶರಣ”
ಎಂದು ಹೊಗಳಿ ಹರಕೆಯಿಟ್ಟು
ಹರಿಗೆಲ್ಲವ ಮೀಸಲಿಟ್ಟು
ಸುಚರಿತ ಅನ್ವರ್ಥನಾಗೆ,
ಸುವ್ರತೆ ನಾಸಕ್ತೆಯಾಗೆ,
ಲೋಭ ಮೋಹ ಮುಕ್ತರಾಗಿ
ಸತ್ಕಾರ್ಯದಿ ಸಿರಿಯ ನೀಗಿ
ಸೊಗಮಿದ್ದರು ಭಕ್ತರಾಗಿ
ಸದಾನಂದ ಯುಕ್ತರಾಗಿ.

ಓ ಜನನೀ ಯದುಗಿರಿ ಸಿರಿ,
ಓ ನಾರಾಯಣ ಸಹಚರಿ
ನೆನೆದೊಡೆನ್ನ ಬಗೆಯ ಸೊಗವೆ
ಎಲ್ಲಿದ್ದರು ನಿನ್ನ ಮಗುವೆ
ನಾನು-ಇಲ್ಲ ಬೇರೆ ತಾಣ.
ಉಣ್ಣುವನ್ನ ಸ್ತನ್ಯಪಾನ
ಕಾಂಬ ಚೆಲುವ ನಿನ ನೋಟ
ಅಪ್ಪ ಸೊಗವು ನಿನ್ನ ಮಾಟ
ಎಲ್ಲ ಹಾಡು ನಿನ್ನ ಲಲ್ಲೆ
ಇಲ್ಲ ನಿನ್ನ ಕರುಣೆಗೆಲ್ಲೆ.
ಕಣಿವೆಯ ನೀರವತೆಯಲ್ಲಿ
ಮಲಗಿಹೆ ನೀ ಪ್ರಭೆಯ ಚೆಲ್ಲಿ
ಘನಶ್ಯಾಮನುರದ ಮೇಲೆ
ಬಿನದದಿಂದ ಬಿಡುವಿರುವೊಲೆ.
ನಿನ್ನುಲ್ಲಸ ಹಕ್ಕಿ ಹಾಡು
ಹೊಳೆವ ಕಿರಣ ನಿನ್ನ ಸೂಡು
ಕೆರೆಯ ತಂಪು ನಿನ್ನ ಸ್ಪರ್ಶ
ಮಂದಿಯೊಲುಮೆ ದಯಾವರ್ಷ
ಮಲೆಯ ಗಾಳಿ ನಿನ್ನಪ್ಪುಗೆ
ಮನದ ನಲ್ಮೆ ನಿನ್ನೊಪ್ಪಿಗೆ.
ಭಗಣದೀಪ್ತ ವಿಭಾವರಿಯ
ಬೆಳುದಿಂಗಳ ಪ್ರಭಾವಳಿಯ
ಯದುಗಿರಿನಭದುತ್ಸವವೇ
ನನ್ನೆರಕೆಯ ಚಿತ್ಸುಖವೇ
ತರಂಗಿಣೀ ಗೀತಾಪ್ರಿಯೆ
ಚಿದಚಿತ್‌ಸೌಂದರ್ಯಾಶ್ರಯೆ,
ಪದುಮದಿಂದ ಉದಿಸಿ ಬಂದ
ಹೊಳಹೊಳೆಲ್ಲ ಹೊಳೆದು ನಿಂದ
ಯದುಗಿರಿನಾಯಕಿ, ತಾಯೇ
ನಾರಣನೊಲು ನನ್ನ ಕಾಯೆ!
ಇಂದು ಭವತಿ ಬಿಚ್ಛಾಂದೇವಿ
ಎಂಬೆಳೆಯಗೆ ನನ್ನಳೋವಿ
ನುಡಿಸಿ ಭಕ್ಷ್ಯವೆರೆವ ರೀತಿ
ನನ್ನ ನುಡಿಗು ತೋರು ಪ್ರೀತಿ.
ನೆನೆವೆ ಜನನಿ-ಶರಣು ಜನನಿ
ಜಯತು ತೇ-ನಮೋಸ್ತು ತೇ
ನಮೋಸ್ತು ತೇ.
*****
* ಉಪಾಕರ್ಮದ ಮಾರನೆಯದಿನದ ಗಾಯತ್ರೀ ಜಪ. ಆದಿನ ಹಸುಳೆಗಳೂ ಬ್ರಹ್ಮಚಾರಿಗಳೂ ಭಿಕ್ಷಾಚರ್ಯ ವೃತವನ್ನು ನಡೆಸುವುದು ಪದ್ಧತಿ.