ಅಪ್ಪಾ ಹೊರಲಾರೇನೋ ಈ ಮಣಭಾರ ಹೆಣಭಾರಾ
ತಿಂದುಂಡ ತುತ್ತುಗಳೆಲ್ಲಾ ಬಾಯಲ್ಲೇರಿ ಬಂದಾಡಿಕೊಳ್ಳುತ್ತವೆ
ಕುಡಿದ ಹನಿಹನಿಯೂ ಕಣ್ಣೀರ ಪೋಣಿಸುತ್ತದೆ
ಸೇವಿಸಿದ ಉಸಿರುಸಿರೂ ಮೂಗುಕಟ್ಟುತ್ತದೆ
ಮಲಗಿದಿಂಚಿಂಚು ನೆಲವೂ ಬಾಯ್ದೆರೆದು ನುಂಗುತ್ತದೆ
ನಡೆದಡಿಯಡಿ ಮಣ್ಣೂ ಮಣ್ಣು ಹೊರಿಸುತ್ತದೆ
ಪಡೆದ ಕಾಸು ಕಾಸೂ ಮಾನವ ಕಾಸಿಗೆ ಪಂಚೇರು ಮಾರುತ್ತದೆ
ಒಂದೇ ಶ್ವೇತಬಿಂದು ಬೆಳೆದು ಬಿಳಿ ತೊನ್ನಾಗಿ ಮೈ ವ್ಯಾಪಿಸಿದೆ
ಒಂದೇ ರೇತೋಬಿಂದು ನಾಳನಾಳವ ತುಂಬಿ ಹರಿದು ರಕ್ತತರ್ಪಣ ಬೇಡುತ್ತದೆ
ತುತ್ತನ್ನವಿಕ್ಕಿದ ಮನೆ ಮನೆಯೂ ತೊತ್ತಾಗು ಬಾ ಎನ್ನುತ್ತಿದೆ
ಅಂಟಿಹರಡಿ ಕವಲಾದ ಕರುಳುಬಳ್ಳಿ ಉರುಲಾಗಿ ಕೊರಳ ಹಿಚುಕುತ್ತದೆ
ಒಂದೊಂದು ಪೈಯೂ ಬಡ್ಡಿ ಚಕ್ರ ಬಡ್ಡಿಯಾಗಿ ಪ್ರಾಣಪಣದ ಲೆಕ್ಕ ಕೇಳುತ್ತದೆ
ಅಂಬೆಯ ಮೊಲೆಹಾಲೇ ಕಕ್ಕು ನನ್ನ ಲೆಕ್ಕವನೆಂದ ಮೇಲೆ
ಅಪ್ಪಾ ಯಾವ ಋಣ ತೀರಿಸಲಿ? ಯಾವ ಭಾರ ಭರಿಸಲಿ?
ಹೊರಲಾರೆನೋ ತಂದೆ ಈ ಗಿರಿಭಾರ-ಋಣಭಾರ-ನಾನು ಅಲ್ಪ.
*****


















