ತೊಗಲ ಚೀಲಗಳಲ್ಲಿ ಬದುಕು ನಡೆದಿದೆ. ಹೊಟ್ಟೆ
ಹೊಸೆಯುವದೆ ಬಾಳುವೆಯು; ನಿದ್ದೆ ಹಿಗ್ಗು;
ಮಣ್ಣಿನಲಿ ಅನ್ನವನು ಹುಡುಕುತಿವೆ ಕಣ್ಣುಗಳು;
ಇನ್ನುವೂ ಹೂತಿಲ್ಲ ಮನದ ಮೊಗ್ಗು.
ಬಾನ ತುಂಬಿದೆ ಶಂಖನಾದ, ತಿರುತಿರುಗುತಿದೆ
ಚಕ್ರ, ಬಣ್ಣಗಳಲ್ಲಿ ಬೀರಿ ಪ್ರಭೆಯ.
ಕಣ್ಣೆತ್ತಿ ಕಿವಿದೆರೆದು ಬಾಳಬೇಕೆಂಬುವರ
ಕರೆಯುತಿದೆ ಸಾಹಸಕೆ, ಸಾರಿ ಅಭಯ.
ಆಡಿಸಿರಿ ಚಕ್ರವನು, ನುಡಿಸಿರಿ ಶಂಖ
ನಕ್ಷತ್ರ ಗುರಿಯಿರಲಿ, ಪುಂಖಾನು ಪುಂಖ.
ಕಣೆಗಳೆಸೆಯಿರಿ, ಸಾರಿ ಸ್ವರ್ಗಕೊಳನುಗ್ಗಿ
ಬರಲಿ ಹೂವಿನ ಹಬ್ಬ, ನಲ್ಲೆದೆಯ ಸುಗ್ಗಿ!
*****