ರಕ್ತ ಸಿಕ್ತ ಕರ್‍ಬಲಾದ ಬೀದಿಗಳೇ
ನಿಮ್ಮೆದೆಯ ಕದವ ತೆರೆದು ಮಾತಾಡಿಸಿ
ಗಲೀಫ್ ತೊಟ್ಟ ಕಲ್ಲು ಗೋರಿಯಾಗಿಸದಿರಿ
ನಿಮ್ಮ ಮನೆ ಬಾಗಿಲಿಗೆ ಬಂದಿರುವೆನು.
ನಿಮ್ಮ ಮನೆ ಮುಂದೆಯೇ ರಕ್ತ ರಣರಂಗವಾಗುವಾಗ,
ನೀವೇಕೆ ಪ್ರತಿಭಟಿಸಲಿಲ್ಲ ಮಾತಾಡಿ ಮೀನಾರುಗಳೇ.
ನಿಮ್ಮ ಬಾಗಿಲ ಮುಂದೆಯೇ ಮನುಷ್ಯತ್ವದ
ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವಾಗ
ನೀವೇಕೆ ಸುಮ್ಮನಿದ್ದೀರಿ ಹೇಳಿ ಮಂದಿರದ ಗೋಪುರಗಳೇ
ಕೊಲೆಯಾಗಿ ಬಿದ್ದ ಶವರಾಶಿಯಲ್ಲಿ
ಜಾತಿ ಹೆಕ್ಕುವವರನು ನಡುಬೀದಿಯಲಿನ ನಿಲ್ಲಿಸಿ ಕೇಳುವೆ
ಕೊಲೆಗಡುಕರೇ ವಿಶ್ವದ ಕಳಂಕಿತರೇ
ಮಂದಿರ, ಮಸೀದಿಯಲಿ ಕದನಕ್ಕೆ ಕಾಲುಕೆದರುವವರೇ,
ದೇಶಭಕ್ತಿಯ ಸೋಗಿನಲಿ ಮುಂದೆ ಬಂದವರೇ
ಹಾಡುಹಗಲೇ ನಿಮ್ಮ ಸೋದರಿ ವಿಧವೆಯಾದುದಕ್ಕೆ
ಧನದಾಹದ ಬೆಂಕಿಯಲ್ಲಿ ಬೆಂದುಹೋದುದಕ್ಕೆ
ದೇಗುಲ ಸಂಸ್ಕೃತಿಗೆ ತಳಪಾಯ ಹಾಕಿದುದಕ್ಕೆ
ಹೆಣ್ಣುಗಳ ಸಾಯಿಸಿ, ಹೊಟ್ಟೆ ಹೊರೆಯುತ್ತಿರುವುದಕ್ಕೆ
ಅವಳ ‘ಸತಿ’ ಗುಡಿಯ ಜೀರ್‍ಣೋದ್ಧಾರದ ಬಗ್ಗೆ
ಎಚ್ಚರ! ಸತಿಯಾದ ಗುಡಿಯ ಕಲ್ಲುಗಳೇ ಕೇಳುತ್ತವೆ
ಮುಂದೊಂದು ದಿನ ನಿಮ್ಮ ಕರ್‍ಮಕಾಂಡದ ಲೆಕ್ಕ
ಅವಳ ಖಾತೆ ಪುಸ್ತಕದಲ್ಲಿ ಬರೆದು
ನಿಮ್ಮನು ಕೋರ್‍ಟಿಗೆ ಎಳೆಯುತ್ತಾಳೆ.
ನಿಮ್ಮ ಮೇಲಿನ ಆರೋಪಪಟ್ಟಿ ಸಿದ್ಧಪಡಿಸುತ್ತಾಳೆ.
ದಾಸ್ತಾವೇಜುಗಳು ಸಾಬೀತಾದ ದಿನ
ಲೋಕದ ಜೈಲಿನ ಗೋಡೆಗಳು ಸಾಕಾಗಲಾರವು
ನಿಮ್ಮನ್ನು ಕೂಡಿ ಹಾಕಲು.
ನಿಮ್ಮ ಪಾಪದ ಬೆಳೆ ಬಾನೆತ್ತರಕ್ಕೆ ಬೆಳೆದು
ಬಹುದೂರ ನಿಮ್ಮ ಮೋಕ್ಷದ ದಾರಿ.
ಕಾವೇರಿ, ಗಂಗೆ, ತುಂಗೆ ಯಮುನೆಯರು
ಸಾಕಾಗುವುದಿಲ್ಲ ನಿಮ್ಮ ಪಾಪ ತೊಳೆಯಲು.
ಕಾವಿಗಳೆದೆಯಲ್ಲಿ ಮುಚ್ಚಿಟ್ಟ ಕೋವಿಗಳೇ
ಮಂದಿರ – ಮಸೀದಿಗಳಲ್ಲಿ ಅಡಗಿಸಿಟ್ಟ ಬಂದೂಕುಗಳೇ,
ಮದ್ದು ತುಂಬಿದ ಕುಂಡ ಕಮಂಡಲಗಳೇ,
ಆಧ್ಯಾತ್ಮದ ಗುಹೆಯಲ್ಲಿ ಮೊಳಕೆಯೊಡೆಯಲಾರಿರಿ
ಕಣ್ಣ ಬಿಂಬದ ತುಂಬ ವಸಂತ ಮೂಡಿಸಲಾರಿರಿ
ಹಸಿದ ಹೊಟ್ಟೆಗೆ ರೊಟ್ಟಿಯಾಗಲಾರಿರಿ
ಮಂತ್ರದುಗುಳಿನಲಿ ತೇಜಾಬು ಬೆರಸಿ
ಗರ್‍ಭಗುಡಿಯಲಿ ಒಳಸಂಚು ನಡೆಸಿ,
ವ್ಯಾಪಾರ ವಹಿವಾಟು ಕುದುರಿಸಲಾರಿರಿ
ಖಾದಿ, ಖಾಕಿ, ಕಾವಿಗಳಿಗೆ
ಅರ್‍ಪಿತ ದೆಹಲಿಯೆಂಬ ಬೆಲೆವಣ್ಣು
ಡಿಸೆಂಬರ್ ಆರು ಬಂತೆಂದರೆ ನಡುಗುತ್ತಾಳೆ
ಬಾಬ್ರಿ ಮಸೀದಿ ನೆಲಕ್ಕುರುಳಿ
ಇತಿಹಾಸದಲ್ಲಿ ಕಪ್ಪಾದ ಆ ದಿನ
ಗುಮ್ಮಟ ಉರುಳಿದ ದಿನ
ಜಟಕಾ ಬಂಡಿ ಸುಟ್ಟು ಹೋದ ದಿನ
ಕೂಲಿ ಬಡವರು ಕರಕಲಾದ ದಿನ
ಸಂಸ್ಕೃತಿಯೆಂಬ ಮಂತ್ರ ಉಗುಳುವ ನೀವು
ಸೌಹಾರ್‍ದ ಸಂಪತ್ತನು ಲೂಟಿ ಮಾಡಿದ ದಿನ
ಗಣಿ ಧೂಳಿನಲ್ಲಿ ಉಸಿರುಗಟ್ಟಿ
ನೆತ್ತರ ಪಸೆಯಲಿ ಮೊಳಕೆ ಹೆಪ್ಪುಗಟ್ಟಿದೆ.
ಬೆಂಕಿ ಬಿದ್ದ ಗುಡಿಸಲಲ್ಲಿ ಅಸ್ತಿಪಂಜರಗಳು
ಕರಕಲಾದ ಕನಸುಗಳಲಿ ಚಿಗುರು ಮೊಳೆತು
ಕೆಂಪು ಹೂವುಗಳು ಅರಳಿ ನಿಂತಾಗ
ಮಂದಿರ – ಮಸೀದಿಗಳ ಠೇಕೇದಾರರಿಗೆ
ಚೌಕದಲಿ ನಿಲ್ಲಿಸಿ ಕೇಳುತ್ತೇನೆ ಪಾಪಿಗಳೇ
ನೀವೆಷ್ಟೇ ಹೊಸಕಿ ಹಾಕಿದರೂ ನಾವು
ಮತ್ತೆ ಮತ್ತೆ ಕಂಪು ಬೀರುವ ಹೂವಾಗಿ
ಅರಳಿ ನಿಲ್ಲುತ್ತೇವೆ ಬಯಲು ನಾಡಿನ ತುಂಬ
ಹಚ್ಚ ಹಸುರಿನ ಆಸೆಯ ಹುಲ್ಲು ಗರಿಕೆಯಾಗಿ
ಸೌಹಾರ್‍ದ ಬದುಕಿಗೆ ನಾಂದಿಯಾಗಿ.
*****