ದಿನ ತುಂಬುವ ಮೊದಲೇ ತಾಯ ಕುತೂಹಲ ಕೆರಳಿಸಿ ತತ್ತಿಯೊಡೆದು
ರಕ್ತಹರಿಸಿ ಮಾಂಸ ಮುದ್ದೆಯುರುಣ ಒಡಮೂಡಿದಂತೆ
ಇವನು ಹುಟ್ಟಿದ್ದೇ ಹಸಿಬಿಸಿಯಾಗಿ
ಯಾರಿಗೆ ತನ್ನ ಮೊದ್ದು ಮುಖವ ತೋರಿಸುವವಸರವೋ
ಕೈಕಾಲು ಪೂರಾ ಅರಳದ ಮೊದಲೇ ಗರ್ಭದೊಳು ಹಳಹಳಿಸಿ
ಭೂಮಿಗವತರಿಸಿದ ಹೆಳವನಾಗಿ ತೆವಳುವಿವನನು
ಮಡಿಲಲ್ಲಿ ಕಟ್ಟಿಕೊಂಡು ಸಾಗುವ ನಮಗೆ ಹತ್ತಿದೆ ಶನಿ
ಇವನ ಕೈಯಿಂದ ಕಡ್ಡಿಯೂ ಆಚಿಂದೀಚೆಗಾಗದು

ಕೈತುತ್ತು ತಿಂದು ಬೆಳೆದೇ ಬೆಳೆದ ಇವನು
ಬೆಳೆದಂತೆಲ್ಲಾ ಬೆಳೆಯಿತು ಹೆಳವತನ ಹಂಡಬಂಡತನ
ಆದರೂ ಎಲ್ಲಾ ಕಡೆಯೂ ಹರಿಯುವ ಹಂಬಲ ಇವನದು
ಇವನನ್ನೆತ್ತಿಕೊಂಡು ಹೆಣದಂತೆ ಹೆಣಗಬೇಕಾಗಿದೆ.

ನಾವು ಹೋಗಬೇಕಾದ ಬಸ್ಸು ಗಾಡಿಗಳೆಲ್ಲಾ ತಪ್ಪಿವೆ
ಬೆಂಡನ್ನು ಬೆನ್ನಿಗೆ ಕಟ್ಟಿ ನೀರಿಗೆ ಬಿದ್ದಾದ ಮೇಲೆ
ಗೊತ್ತಾದುದು ಬೆಂಡಲ್ಲ ಗುಂಡೆಂದು
ಮೆರೆದಾಟ ಬೇಕೆಂಬ ಇವನು ಹಪಾಪೀತನಕೆ
ಸ್ಟೇಜಿನ ಮೇಲೇರಿದರೆ ಮಾತು ಬಾರದೆ ಬೆ ಬೆ ಬೆ ಅಂದಾಗ
ಅವರಿವರಿಂದ ಛೀಮಾರಿ ನಮಗೆ
ನಮ್ಮ ಸರೀಕರೆಲ್ಲ ಗುರಿಮುಟ್ಟಿ
ತಂತಮ್ಮ ತಲೆಗಳಲ್ಲಿ ಗರಿಪುಚ್ಚ ಕಟ್ಟಿಕೊಂಡಿದ್ದರೂ
ನಾವಿನ್ನೂ ಗರಡೀಮನೆ ಬಿಟ್ಟಿಲ್ಲ ಅಥವಾ ಬಿಡುವುದೇ ಇಲ್ಲವೇನೋ
ಕೈಕಾಲು ತೊಡಕಿರುವ ಈ ಮೂದೇವಿಯಿಂದ ಮೂಲೆ
ಗುಂಪಾಗಿದ್ದೇವೆ ನಾವು
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)