ಏಕಿಂಥ ಬಿಗುಮಾನ
ಬಾಗಿಲಾಚೆಯ ಮೌನ?
ಹೊಸ್ತಿಲವರೆಗೂ ಬಂದು ನಿಂತು
ಮುಖವ ಮರೆಸುವುದೇ ಇಂತು?

ಹೇಳದೇ ಬರುವವರು
ಕೇಳದೇ ಹೋಗುವವರು
ಎಲ್ಲರಿಗಾಗಿ ವಿಸ್ತಾರವಾಗಿ
ತರೆದೇ ಇದೆ ಬಾಗಿಲು.

ನೀನು ಅತಿಥಿಯೂ ಅಲ್ಲ
ದೇವಮಾನವನೂ ಅಲ್ಲ
ನನ್ನದೇ ಕಳೆದು ಹೋದ
ಒಂದು ತುಣುಕು ಮೌನ ಮಾತ್ರ!

ನಾನು ನಿನಗಾಗಿ ಕಾಯುತ್ತಿಲ್ಲ
ಕಾಲ ಅನಂತ ನನಗೆ ಅವಸರವಿಲ್ಲ
ಬಾರದಿದ್ದರೇ ಎಂಬ ಆತಂಕವಿಲ್ಲ
ಹುಡುಕಾಟದ ಕೊನೆ ನೀನೆಂಬ ನಂಬಿಕೆಯಿಲ್ಲ.

ಇಂದಲ್ಲ ನಾಳೆ ನನ್ನ ತೆಕ್ಕೆಗೇ
ಬಂದು ಬೀಳುವೆಯೆಂಬ ಭರವಸೆಯಿದೆ
ನನ್ನೆದೆಯೊಳಗೆ ನಿನ್ನ ಪ್ರತಿರೂಪವಿದೆ
ಬಿಟ್ಟು ಎಲ್ಲಿ ಹೋಗುವೆ ಬರದೆ?
*****