ಇಂದಿನ ಸತ್ಯವನು
ಮುಂದಿನ ತಲೆಮಾರಿಗೆ
ಸಾಗಿಸುವ ವಾಹಕ
ಸತ್ಯದ ಪಕ್ಷಪಾತಿ
ಗಟ್ಟಿ ಬೆಟ್ಟದಂತೆ
ನಿಲ್ಲುವುದು ಎಂದಿಗೂ
ನನ್ನ ಲೇಖನಿ

ಧರ್‍ಮಕ್ಕೆ ಬದ್ದವಾಗಿ
ಅಧರ್‍ಮಕ್ಕೆ ಶತ್ರುವಾಗಿ
ಸಾತ್ವಿಕತೆಯ ಪರವಾಗಿ
ಎದ್ದು ನಿಲ್ಲುವದು ಎಂದಿಗೂ
ನನ್ನ ಲೇಖನಿ!
ಸಾತ್ವಿಕರ ಶಕ್ತಿಯಾಗಿ
ದುರಳರಿಗೆ ಭರ್‍ಜಿಯಾಗಿ
ನಿಲ್ಲುವುದು ಎಂದಿಗೂ
ನನ್ನ ಲೇಖನಿ

ನನ್ನದೇ ಪ್ರತಿಬಿಂಬ
ರಕ್ತ ಮಿಂದಿದೆ ಅಕ್ಷರ
ಮೌಲ್ಯಗಳ ತಾಕಲಾಟದಲಿ
ನನ್ನವರ ಪರ ನಿಂತು
ಯುದ್ಧ ಮಾಡುತ್ತದೆ ಎಂದಿಗೂ
ನನ್ನ ಲೇಖನಿ
ನ್ಯಾಯದ ಪಕ್ಷಪಾತಿಯಾಗಿ
ಹೋರಾಡುತ್ತದೆ ಎಂದಿಗೂ
ನನ್ನ ಲೇಖನಿ.

ತತ್ವಗಳಿಗೆ ನಿಷ್ಠವಾಗಿ
ಸತ್ಯದ ಸಂಗಾತಿಯಾಗಿ
ಬದ್ಧತೆ ಉಳಿಸಿಕೊಂಡಿದೆ
ಬದುಕಿನ ಚೇತನವಾಗಿದೆ
ಪ್ರಗತಿಗೆ ಪೂರಕವಾಗಿ
ನೈತಿಕ ಶಕ್ತಿಯಾಗಿ
ನಿಲ್ಲುತ್ತದೆ ಎಂದಿಗೂ
ನನ್ನ ಲೇಖನಿ.

ಮನಸು ಭಾರವಾದಾಗ
ಕೈಹಿಡಿದು ಮೈದಡವಿ ಸಂತೈಸಿ
ಸಂಕಟಗಳು ಮುತ್ತಿದಾಗ
ಬದ್ಧತೆಯ ಬೆವರುವಾಗ
ಧೈರ್‍ಯ ತುಂಬಿದೆ
ಬೆಂಬಲಕೆ ನಿಂತಿದೆ
ನನ್ನ ಲೇಖನಿ.
*****