ತಾಯ ಪ್ರೀತಿಯ ಹಸ್ತ ನೀಚಾಚಿ ಬಾರಯ್ಯಾ
ಓ ಪ್ರೇಮ ಯುಗಶಿಲ್ಪಿ ದೇವದೇವಾ
ನೀನೆ ನವಯುಗ ಶಿಲ್ಪಿ ಕಲ್ಪ ಕಲ್ಪದ ಶಕ್ತಿ
ಕೇಳು ಮಕ್ಕಳ ಕೂಗು ವಿಶ್ವದೇವಾ
ತಾಯಿಯೆಂದರು ನೀನೆ ತಂದೆಯೆಂದರು ನೀನೆ
ನೀನಿಲ್ಲದಿನ್ನಾರು ಇಲ್ಲವಯ್ಯಾ
ನೀನೆ ಮೌನದ ಮೌನ ನೀನೆ ಭುವನದ ಗಾನ
ನೀ ಬರದೆ ಹೊಸಯುಗವು ಬಾರದಯ್ಯಾ
ದೇವರಾ ಹೆಸರಿಂದ ರಕ್ತದೋಕುಳಿ ನೋಡು
ಧಗಧಗನೆ ಈ ಧರಣಿ ಉರಿಯುತ್ತಿದೆ
ಮನುಕುಲದ ಉಡಿಯಲ್ಲಿ ಭೂತಬೆಂತರ ಆಟ
ನೀ ಬರದೆ ಉಳಿಗಾಲ ಇನ್ನೆಲ್ಲಿದೆ
ಕಲ್ಪವೃಕ್ಷದ ಗಿಳಿಯು ಕೂಗಿ ಕರೆದಿಹುದಯ್ಯ
ನವಯುಗದ ಬಾಗಿಲವ ತೆರೆಯಬಾರಾ
ಸಾಕು ಕತ್ತಲೆಯುಗವು ಬೇಕು ಬೆಳಕಿನ ಜಗವು
ಪ್ರೇಮ ಪೌರ್‍ಣಿಮೆಯಾಗಿ ಬೆಳಗುಬಾರಾ
*****