ಭಗವಿದ್ದಿತು ಭಗವಂತನಿದ್ದನು
ಫ್ರಾಯ್ಡನು ಬರುವ ವರೆಗೆ
ಕಾಮವಿದ್ದಿತು ಪ್ರೇಮವಿದ್ದಿತು
ರೋಮಾಂಚನವು ಇದ್ದಿತು.
ಹೆಣ್ಣುಗಂಡುಗಳಿದ್ದರು
ಸ್ತ್ರೀಲಿಂಗ ಪುಲ್ಲಿಂಗಗಳಿದ್ದುವು
ಅಂಗನೆಯರಿದ್ದರು ಅನಂಗನು ಇದ್ದನು
ಅವನ ಕೈಯಲಿ ಕಬ್ಬಿನ ಬಿಲ್ಲು ಇದ್ದಿತು
ಲಿಂಗವಿದ್ದರೂ ಲೈಂಗಿಕತೆಯಿರಲಿಲ್ಲ
ಫ್ರಾಯ್ಡನು ಬರುವ ವರೆಗೆ
ಫ್ರಾಯ್ಡನು ಬಂದನು-ಕತೆಯೇನೇ ಇದ್ದರೂ
ಮೂಲದಲದು ಲೈಂಗಿಕತೆಯೇ ಎಂದನು
ರಾಮಾಯಣ ಮಹಾಭಾರತ
ಈಲಿಯಡು ಒಡಿಸ್ಸಿ
ಎಲ್ಲಾ ಲೈಂಗಿಕ ಎಲ್ಲಾ ದಮನಿತ
ಪರದೆಯೆತ್ತಿದರೆ ಹಸಿಹಸಿ
ಕನಸು ಅದರ ಭಾಷೆ ನನಸು ಅದರ ಭಾಷೆ
ಮಾತಿನ ನಡುವಿನ ಮೌನ ಅದರ ಭಾಷೆ
ಮೈನಡುಕ ಅದರ ಭಾಷೆ
ಕುಡಿತ ಅದರ ಭಾಷೆ
ಪ್ರೀತಿ ಪ್ರೇಮ ಲೈಂಗಿಕತೆಯೆ
ಮಮತೆ ಮೋಹ ಲೈಂಗಿಕತೆಯೆ
ಎಲ್ಲವೂ ಲೈಂಗಿಕತೆಯೆ
ಭೋಗ ಮಾತ್ರವೆ ಲೈಂಗಿಕತೆಯಲ್ಲ
ಅದೊಂದೇ ನಿಜವಾದ ಕತೆ
ಎಂದನು
*****