ಅರಸು ವಿಶ್ವಾಮಿತ್ರ ಮಾತುಗೆಲುವ ಮನೀಷೆ-
ಯಿಂದ ಕಾಡನು ಸೇರಿ ಮುನಿಯಾಗಬಯಸಿದನು.
ಜಯಲಕ್ಷ್ಮಿ ತನ್ನ ವಶವಿರಲೆಂದು ಸಹಿಸಿದನು
ನೂರು ಸಂಕಟಗಳನು, ಪೂರೈಸದಭಿಲಾಷೆ.
ಸ್ವರ್‍ಲೋಕದವರು ಕಳುಹಿಸಿದ ಮೇನಕೆಯಾಸೆ-
ಗಾಗಿ ಮತ್ತೆ ಪ್ರಪಂಚಭಾರವನ್ನು ವಹಿಸಿದನು
ಅರಸೆಂಬ ಹಂಬಲಕೆ ಮನಸೋತು ಸೃಜಿಸಿದನು
ಸೃಷ್ಟಿಯನ್ನು ಪ್ರತಿಯಾಗಿ ಒಂದು ಹಿರಿಯ ತಮಾಷೆ !

ತೊಲಗಲೀ ಮದವು ಕ್ಷತ್ರಿಯನಾದ ರಾಜರ್‍ಷಿ.
ಬಟ್ಟಬಯಲಾಗಿರಲು ಅವನ ಕೋಪಾಟೋಪ,
ಸತ್ಯಸಂಧರ ಹಿಡಿದು ಸತ್ಯದುರುಲನು ಹಾಕಿ
ಅವರ ಕೆಣಕುವ ರೀತಿ ಅವನಾದ ಬ್ರಹ್ಮರ್‍ಷಿ.
ಅಳುಕಿದವರಿಗೆ ತಪವ ದಾನಗೈದ ವಿವೇಕಿ,-
ಅವನ ನೆನವುಳಿವನಕ ಧರ್‍ಮಕೆಲ್ಲಿದೆ ಲೋಪ ?
*****