ಶತಶತಮಾನಗಳಿಂದ
ಧಗಧಗನೆ ಹೊತ್ತಿ
ಉರಿಯುತ್ತಲೇ ಇದೆ
ಈ ಅಗ್ನಿಕುಂಡ.

ಬೇಯುತ್ತಲೇ ಇದೆ
ತಪ್ಪಲೆಯೊಳಗೆ
ಅನ್ನವಾಗದ ಅಕ್ಕಿ!
ಮತ್ತೆ ಮತ್ತೆ
ಸೌದೆಯೊಟ್ಟಿ
ಉರಿ ಹೆಚ್ಚಿಸುವ ಕಾಯಕ.

ತಪ್ಪಲೆಗೆ ನೀರು ಸುರಿದು
ತಳ ಸೀಯದಂತೆ
ಕಾಯುವ ಕರ್ಮ
ನಡೆದೇ ಇದೆ ನಿರಂತರ.

ಆದರೂ
ಅಕ್ಕಿ ಬೇಯುವುದಿಲ್ಲ
ಅನ್ನವಾಗುವುದಿಲ್ಲ.
ಎದುರಿಗೆ ಕುಳಿತ
ಮಂದಿಗೆ
ಬ್ರಹ್ಮಾಂಡ ಹಸಿವು

ಒಳ – ಹೊರಗೆಲ್ಲಾ
ಚುರುಗುಡುವ ಕಾವು ಅನ್ನವಾಗದ
ಅಕ್ಕಿಯನ್ನೇ ಮುಕ್ಕಿಬಿಡುವ
ಉಮೇದು!

ಅನ್ನವಾಗುವವರೆಗೂ
ತಪ್ಪಲೆ ಮುಟ್ಟಲಾಗದ
ಶಾಪ ಇವರಿಗೆ
ಕಾಯಲಾರೆವೆಂದರೆ ಹೇಗೆ?

ತಪ್ಪಲೆಯ ನೀರು
ಕೊತಕೊತನೆ ಕುದಿವ ರಭಸಕ್ಕೆ
ಹೊರ ಹಾರಿದ
ಒಂದೋ ಎರಡೋ
ಅಕ್ಕಿ ಕಾಳಿಗೇ ಇಲ್ಲಿ

ಹೊಡೆದಾಟ ಬಡಿದಾಟ
ಮೈಕೈ ಮುರಿದಾಟ
ಅಕ್ಕಿಕಾಳು
ಸಿಕ್ಕಿದವರು
ಪಚನವಾಗದಿದ್ದರೂ ಜಗಿದ
ರುಚಿಯ ಕುರಿತು
ದಕ್ಕಿದಂತೆ
ತರ್ಕ – ವಿತರ್ಕ
ವರ್ಣನೆ – ಆರೋಪ

ತಪ್ಪಲೆಯ ಅಕ್ಕಿಯಿಡೀ
ಅನ್ನವಾಗಿಬಿಟ್ಟರೇ?
ಗತಿಯೇನು?

ಅದಕ್ಕೇ
ಅತ್ತ ಅಕ್ಕಿ ಬೇಯುವುದಿಲ್ಲ
ಅನ್ನವಾಗುವುದಿಲ್ಲ
ಇತ್ತ ಹಸಿವೂ ಹಿಂಗುವುದಿಲ್ಲ
ಕುತೂಹಲವೂ ತಣಿಯುವುದಿಲ್ಲ
ಕಾಯುವುದೂ ತೀರುವುದಿಲ್ಲ!
*****