‘ಎಲವೊ ದುರುಳ ನಿಷಾದ, ಕೊಂಚೆಯೆಣೆಯಿಂದಂ
ಕಾಮಮೋಹಿತನಿನೆಯನನ್ನೆಸೆದೆ ಎಂದು,
ನೀಂ ಪ್ರತಿಷ್ಠೆಯನೊಂದದಿರು ಧರೆಯೊಳೆಂದುಂ!೧
ಕನಿಕರಂ ಕನಲಲಿಂತಾದಿಕವಿ ಎಂದಂ.   ೪
ಗದ್ಗದಿಸಿತೊಡನೆ ವಾಣಿಯ ವೀಣೆ, ಮುಂತೇ
ಲಿತು ಬಾಷ್ಪಗಾನ! ವಲಮದರ ಮಧುರಿಮೆಯಿಂ
ನಿಮ್ಮುಸಿರ ಸೌಸವಂ! ರಜನಿಯಿಮೆಯಿಮೆಯಿಂ೨
ಮಧುದಿನಾಂಶದ ಶಾಂತಿ ಕನವರಿಯುವಂತೆ೩   ೮
ನಿಮ್ಮ ನಾನಾ ನಿನಾದದ ವಿಪಂಚಿಗಳ
ನಂತ ತಂತಿಯೊಳೊಂದು ತಂತಿಗುಲಿಯೊಂದೇ!
ಆದೊಡಂ, ಕವಿಗಳಿರ, ಎಲ್ಲ ತಂತಿಗಳ
ಸಂಗಡಿಸಿ ನುಡಿಸೆ ಕರುಣಾಧ್ವನಿಯನೊಂದೇ   ೧೨
ಸೂಸುವುದು ಮೇಳವಂ! ಸುಯ್ಯೊಂದು, ನರುಕಂ
ಬನಿಯೊಂದು, ಬಿಕ್ಕೊಂದು-ಕವಿತೆ ಗಡ ಮರುಕಂ!
*****
೧ ‘ಮಾ ನಿಷಾದ ಪ್ರತಿಷ್ಠಾಂ ತ್ವ ಮಗಮ ಶಾಶ್ವತೀ ಸಮಾ |
ಯತ್ಕ್ರೌಂಚಮಿಥುನಾದೇಕಮವಧೀ  ಕಾಮಮೋಹಿತಮ್||’ (ವಾಲ್ಮೀಕಿ ರಾಮಾಯಣ)
೨ ರಾತ್ರಿಯ ಎವೆ ಎಂದರೆ ನಕ್ಷತ್ರ
೩ ಕನಸಿನಿಂದ ಎಚ್ಚರವಾಗು