ಪರಶುರಾಮನ ಮಹೋತ್ತುಂಗ ದೋರ್‍ದಂಡ ಉ-
ದ್ದಂಡ ಸಹ್ಯದಸಹ್ಯ ಸಾಮರ್‍ಥ್ಯದಲಿ ನೀಡಿ-
ಕೊಂಡಿದೆ. ಇದೊ ಅಪರಜಲಧಿಯು ಪರಾಜಿತರ
ನಯದೊಳಂಭೋದಕಂಭಗಳಿಂದ ರಾಜ್ಯಾಭಿ-
ಷೇಕ ಮಾಡುವದು ವರ್‍ಷಕ್ಕೆ. ಸ್ವಚ್ಛಂದನಿ
ರ್‍ಬಂಧ ಸ್ವಾತಂತ್ರ್ಯದೊಳು ನೀರೆ ತೀಡುವಳು ಸೀ-
ಮಾರೇಖೆ. ಕಾಡಬೇಡರ ಸಹಜಯೋಗದಲಿ
ಸಾರ್‍ವಭೌಮನ ಹಾಗೆ ಸುತ್ತು ಹಬ್ಬಿದೆ ಪ್ರಕೃತಿ.

ಬಾಲಕರ ಮಣ್ಣಾಟದೊಳಗಿನೊಡ್ಡುಗಳನನು-
ಕರಿಸಿ, ಬೆಟ್ಟದ ಪಾದದೆಡೆಗೆ ಕುಳಿತಿದೆ ಧೂರ್‍ತ
ವಿನಯದಲಿ ಭಾಟಘರ ಸಾಗರದ ಅಣೆಕಟ್ಟು;
ಉಪಯೋಗ ಕೋರಿ, ಸಂಸಾರಿಕನ ರೀತಿಯಲಿ
ಸುಂಕ ಬೇಡುತ್ತಿಹುದು ಕಾಡ ಸರಕಿನ ಮೇಲೆ.
ಎಂತು ಪ್ರಕೃತಿ ಪ್ರಚಂಡ, ಅಂತೆ ಮಾನವನ ಕೃತಿ!
*****