ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ
ಇಂಥ ಅದ್ಭುತ ಶಕ್ತಿ ಎಲ್ಲಿಂದ ಪಡೆದೆಯೆ ?
ಕಣ್ಣಿಂದ ಕಂಡದ್ದ ಸುಳ್ಳೆಂದು ಹುಸಿನುಡಿವ
ಕಪ್ಪು ಬಿಳುಪೆಂದು ವಾದಿಸುವ ಬಲ ನೀಡಿದೆಯೆ ?
ಕೆಟ್ಟದೂ ಒಳಿತೆನಿಸುವುದು ಹೇಗೆ ನಿನ್ನಿಂದ ?
ಯಾರು ಕಲಿಸಿದರು ನಿನಗೀ ವಿದ್ಯೆಯನ್ನೆಲ್ಲ ?
ನಿನ್ನ ಹೊಲಗೆಲಸವೂ ನೀ ಅಲ್ಲಗಳೆದಾಗ
ಅನ್ಯರುತ್ತಮಿಕೆಗೂ ಮಿಗಿಲು ಎನಿಸುವುದಲ್ಲ.
ನಿನ್ನ ಕಥೆ ಎಷ್ಟೊಂದು! ಕೇಳಿದಷ್ಟೂ ನಿನಗೆ
ಹಂಬಲಿಸುವೆನು ಮತ್ತೆ, ಏನು ನಿನ್ನೀ ಮೋಡಿ ?
ಪರರು ಹಳಿದವಳನ್ನು ಒಲಿದೆ, ನೀ ಬದಲಿಗೆ
ಪರರೆದುರು ಹಳಿಯದಿರು ನನ್ನನ್ನೆ ಬಲಿಮಾಡಿ,
ಒಲವುಕ್ಕಿಸುವುದು ನಿನ್ನೆಲ್ಲಾ ಅನರ್ಹತೆ
ಎಂದೇ ನನಗಿದೆ ನಿನ್ನ ಪ್ರೀತಿಗತಿ ಅರ್‍ಹತೆ
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 150
Oh from what power hast thou this powerful might