ಬಾ, ಶ್ರಾವಣ ಶುಭಸಮೀರ ಬಾರಾ!

ಬಾರೈ ಶ್ರಾವಣ ಸಮೀರ,
ಕಾಲನೊಲುಮೆಯೋಲೆಕಾರ,
ಸುಖನಾಟಕ ಸೂತ್ರಧಾರ,
ಬುವಿಯ ಬೇಟಗಾರಾ!
ಬಾ, ಶ್ರಾವಣ ಶುಭಸಮೀರ ಬಾರಾ! ೧

ಪಡುಗಡಲಿಗೆ ತೆರೆಯು ಹೇರಿ,
ಜಡಿಯು ಮುಗಿಲ ಕೆಳೆಯ ಸೇರಿ,
ನಿಡುಮಲೆಗಳ ತಲೆಯನೇರಿ,
ಕಣಿವಯಿಳಿದು ಬಾರಾ!
ಬಾ, ಶ್ರಾವಣ ಶುಭಸಮೀರ ಬಾರಾ! ೨

ತೆಂಗು-ಕಂಗು ಬಾಳೆ-ಹಲಸು,
ಹೊಂಗೇದಗೆ ಬನದ ಬೆಳಸು,
ನಿನ್ನಿಂದಲೆ ಎಲ್ಲ ಹುಲುಸು!
ಸಿರಿಯ ಸಂಚುಗಾರಾ!
ಬಾ ಶ್ರಾವಣ ಶುಭಸಮೀರ ಬಾರಾ! ೩

ಬನದ ತರುವನೊಲೆದಾಡಿಸಿ,
ತೊನೆವ ಲತೆಯ ನಲಿದಾಡಿಸಿ,
ಬೆಳಕಿಗು ಹಸಿರನು ಕೂಡಿಸಿ,
ಚತುರ ಶಿಲ್ಪಧೀರಾ!
ಬಾ, ಶ್ರಾವಣ ಶುಭಸಮೀರ ಬಾರಾ! ೪

ಬಾಯ್ದೆರೆದಿದೆ ಬಯಲುನೆಲ,
ಕಾಯ್ದಿದೆ ಇದೊ ಬೀಜಕುಲ,
ಬಂದು ಸುರಿಸು ಚೈತ್ಯ ಜಲ
ಮಳೆಯ ಮೋಡಿಕಾರಾ!
ಬಾ, ಶ್ರಾವಣ ಶುಭಸಮೀರ ಬಾರಾ! ೫

ಬೆಳುವಲಿಗರ ಬರಿಯ ಮನೆ-
ನೀನೊಲಿದರೆ ಸಿರಿಯ ತೆನೆ !
ಉಲಿದು ನಲಿದು ರುಮುಝುಮು ಎನೆ
ಸುಳಿ ಸುಳಿ ಸುಖಸಾರಾ !
ಬಾ, ಶ್ರಾವಣ ಶುಭಸಮೀರ ಬಾರಾ! ೬

ನಿನ್ನ ಗತಿಯ ಗೆಜ್ಜೆನಾದ
ನಲ್ಲ-ನಲ್ಲರೆದೆಗೆ ಮೋದ
ಶೃಂಗಾರದ ಸುಖೋನ್ಮಾದ-
ಸೃಷ್ಟಿಗೆ ಸಹಕಾರಾ!
ಬಾ, ಶ್ರಾವಣ ಶುಭಸಮೀರ ಬಾರಾ! ೭
*****