– ಪಲ್ಲವಿ –

ಊದುತಿರುವ ಮುರಲಿ- ಶ್ರೀ
ಯಾದವೇಂದ್ರನಿಂದು !
ಕುಂಜವನದಿ ಬಂದು ನಿಂದು,
ಊದುತಿರುವ ಮುರಲಿ !

ಹಿಮಕಿರಣ ನಭದಿ ಹೊಳೆಯೆ,
ಮಧುಪವನ ವನದಿ ಸುಳಿಯೆ,
ಸುಮಜಾತ ಸುರಭಿ ಸುರಿಯೆ –
ರಮಣೀಯ ಭಾವ ಹರಿಯೆ –
ಊದುತಿರುವ ಮುರಲಿ ! ೧

ಬೆಳುದಿಂಗಳಂದವೇನು !
ಎಳನಗೆಯ ಸವಿಯಜೇನು !
ಕೊಳಗಳಲಿ ಕುಮುದ ಕುಲವು
ಅರಳಿ ಬಾಯ್‌ದೆರೆಯುತಿಹವು-
ಊದುತಿರುವ ಮುರಲಿ! ೨

ಮಾಧವನ ಮುರಲಿನಾದಾ
ಆಲಿಸುತ ನಲಿದು ರಾಧಾ,
ಮನ ನೀಡಿ ನಿಲಲು ಬೇಗ
ಕೇಳಿಸಿತು ಪ್ರಣಯರಾಗ-
ಊದುತಿರುವ ಮುರಲಿ! ೩

ಬಾ ರಾಧೆ, ರಾಧೆ-ಎಂದು
ಆ ರವವು ಕರೆಯುತಿಹುದು :
ಮನೆ-ಮಾರುಗಳನೆ ತೊರೆದು
ನಡೆದಳು ಕೊಳಲುಲಿಯ ಹಿಡಿದು
ಊದುತಿರುವ ಮುರಲಿ! ೪

ನೋಡಿದಳು ರಾಧೆ ಬನವ,
ಕೂಡಿರುವ ಚೆಲುವುಧನವ ;
ಬನದ ತರು-ಲತೆಗಳೆಲ್ಲಾ
ಬಿನದದಲಿವೆ ಕೇಳಿ ಕೊಳಲ !
ಊದುತಿರುವ ಮುರಲಿ ! ೫

ಕೇಳುತಿದೆ ಮುರಲಿಯುಲಿಯು
ಕಾಣದಿದೆ ಪ್ರಿಯನ ನೆಲೆಯು ;
ಕಳವಳದಿ ಹುಡುಕುತಿಹಳು
ಒಳಗೆ ಬಲು ಮಿಡುಕುತಿಹಳು-
ಊದುತಿರುವ ಮುರಲಿ! ೬

‘ಎಲ್ಲಿರುವ ನನ್ನ ಶ್ಯಾಮ ?
ಎಲ್ಲಿಹನೊ ಪ್ರೇಮಧಾಮ ?’
ಬಾಯ್‌ಬಿಡುತಲಿಂತು ಮರುಗಿ
ಸುಯ್ದು ಕುಳಿತಿರಲು ಸೊರಗಿ-
ಊದುತಿರುವ ಮುರಲಿ! ೭

ಶ್ಯಾಮನೆಲ್ಲಿಂದ ಬಂದ ? -ಓ
ರಾಮೆಯೆದುರಿನಲಿ ನಿಂದ !
ಹಮ್ಮಯಿಸಿ ತನ್ನ ಮರೆತು
ಒಂದಾದಳು ಪ್ರಿಯನ ಬೆರೆತು-
ಊದುತಿರುವ ಮುರಲಿ! ೮
*****