– ಪಲ್ಲವಿ –

ಪ್ರೇಮಸುಧಾಮಯಿ ಶಕುಂತಲೇ !
ಜೀವನಕೌಮುದಿ ಪೂರ್ಣಕಲೇ !


ಸುರಸೌಂದರ್ಯದ ಮನದೊಳು ಮೊಳೆದೆ,
ಪರಮತಪೋರಾಶಿಯ ಫಲ ತಳೆದೆ ;
ಧರಣಿಯ ಚೆಲುವಿನ ಕೆಳೆಯಲಿ ಬೆಳೆದೆ-
ಗುರುಕಾಶ್ಯಪಲಾಲಿತ ಬಾಲೇ,
ಪ್ರೇಮಸುಧಾಮಯಿ ಶಕುಂತಲೇ !


ನಿನ್ನ ಒಲವಿನೆದೆ ಅರಳಿದ ಹೂವೆ,
ನಿನ್ನ ಮುಳಿಸು ಹೆಡೆಯೆತ್ತಿದ ಹಾವೆ,
ನಿನ್ನ ನೀತಿಯ ನಾರಿಯರೋವೆ-
ಪಾವನತಾಮಣಿಗಣಮಾಲೆ,
ಪ್ರೇಮಸುಧಾಮಯಿ ಶಕುಂತಲೆ !


ರಾಯ ಭರತನನು ಬಸಿರಲಿ ಧರಿಸಿ,
ತಾಯ್‌ನೆಲಕಾತನ ಹೆಸರನು ಬರಿಸಿ,
ಸ್ತ್ರೀಯರ ಘನತೆಯ ಮಹಿಯಲಿ ಮೆರಸಿ-
ಅಮರಳಾಗಿ ನೀ ನಿಂದೆಯಲೆ
ಕವಿಕುಲಗುರುವಿನ ಲಲಿತಕಲೆ !
*****