ನನ್ನೆಚ್ಚರದಲು ನಿದ್ದೆಯಲು
ಓ ಕನ್ನಡ ತಾಯೆ
ಕಾಪಾಡುತಿರಲಿ ನಿನ್ನ ಶ್ರೀಯೆ

ಸ್ಮೃತಿಯಾಗಿ ಬಂದು ಕನಸಾಗಿ ಕಂಡು
ನನ್ನನಾವರಿಸಲಿ ಸದಾ ನಿನ್ನ ಮಾಯೆ

ಮುಗಿಲು ನೀನೆ ಮುಗಿಲ ತುಂಬ
ಮಳೆಯು ನೀನೆ
ಸೋನೆ ಹನಿ ನೀನೆ ಮಣ್ಣ ಶ್ರೀಗಂಧ ನೀನೆ
ಅದರ ತಂಪು ನೀನೆ

ನಳನಳಿಸುವ ಬೆಳೆಯು ನೀನೆ
ಅದರ ಉಲ್ಲಾಸ ನೀನೆ
ಮರಮರಗಳ ಲಾಸ ನೀನೆ
ಸುಳಿವ ಗಾಳಿಯ ವಿಲಾಸ ನೀನೆ

ತುಂಬಿದ ಕೆರೆ ನೀನೆ
ಅದರೊಳಗಿನ ತೆರೆ ನೀನೆ
ಹಕ್ಕಿಗಳ ಗೂಡು ನೀನೆ
ಅವುಗಳ ಹಾಡು ನೀನೆ

ನೀಡುವ ಕೈ ನೀನೆ
ಕರುಣಾಮಯ ಕಣ್ಣು ನೀನೆ
ನೀತಿ ನಿಯಮ ನೀನೆ
ವಿನಯ ಸಂಯಮ ನೀನೆ

ಆಕಾಶ ನೀನ
ಅಕಾಶದ ಮೇರೆ ನೀನೆ
ಮೇರೆ ಮೀರಲು ಹಾರುವ ನನ್ನ ರೆಕ್ಕೆಗಳ
ಬಲವು ನೀನೆ ಛಲವು ನೀನೆ
ಮುನ್ನಡೆಸುವ ಒಲವು ನೀನೆ
*****