ಅವಳ ಹೆಸರು ಇವಳಿಗಿಷ್ಟ
ಇವಳ ಹೆಸರು ಅವಳಿಗಿಷ್ಟ
ಅವಳ ಹೆಸರಲಿವಳ ಕರೆದು
ಇವಳ ಹೆಸರಲವಳ ಕರೆದು
ನೋಡಬೇಕೇ ನಾನು ಹಾಡಬೇಕೇ
ಮಲ್ಲಿಗೆಗೆ ಗುಲಾಬಿಯಿಷ್ಟ
ಗುಲಾಬಿಗೆ ಮಲ್ಲಿಗೆಯಿಷ್ಟ
ಅದರ ಪರಿಮಳ ಇದಕೆ ಇಟ್ಟು
ಇದರ ಬಣ್ಣ ಅದಕೆ ಕೊಟ್ಟು
ನೋಡಬೇಕೇ ನಾನು ಹಾಡಬೇಕೇ
ಕುರಿಗಳಿಗೆ ಮೋಡಗಳಿಷ್ಟ
ಮೋಡಗಳಿಗೆ ಕುರಿಗಳಿಷ್ಟ
ಕುರಿಗಳ ತುಪ್ಪುಳ ಮೋಡಕೆ ಅಂಟಿಸಿ
ಮೋಡದ ಹಗುರದಿ ಕುರಿಗಳ ತೇಲಿಸಿ
ನೋಡಬೇಕೇ ನಾನು ಹಾಡಬೇಕೇ
ಮುಂಜಾನೆಯ ಮಂಜಿಗೆ ಹೊಗೆಯಿಷ್ಟ
ಹೊಗೆಗೋ ಮುಂಜಾನೆಯ ಮಂಜಿಷ್ಟ
ಕೆಳಗಿಳಿಯುವುದನು ಮೇಲಕೆ ಕಳಿಸಿ
ಮೇಲೇರುವುದನು ಕೆಳಕ್ಕೆ ಇಳಿಸಿ
ನೋಡಬೇಕೇ ನಾನು ಹಾಡಬೇಕೇ
*****