ಮಾಡಿದಷ್ಟೂ ಮುಗಿಯದೆ
ಬಾಕಿ ಇನ್ನೂ ಉಳಿದಿದೆ
ಜೀವನದ ಕೆಲಸ
ಅಲ್ಲಿ ಅಷ್ಟು ಇಲ್ಲಿ ಇಷ್ಟು
ಅದು ಹಾಗೆ ಇದು ಹೀಗೆ
ಯಾವುದೊಂದೂ ಮುಗಿಯದೆ
ಜೀವನದ ಕೆಲಸ

ಕೊಟ್ಟ ಮಾತುಮಾತಲ್ಲೆ
ಹೊರಟ ಕಾರ್ಯ ಹೊರಟಲ್ಲೆ
ಇವನ್ನೆಲ್ಲ ಒಟ್ಟು ಸೇರಿಸಿ ರೂಪ ಕೊಡುವುದೆಂದು
ಇವಕ್ಕೆಲ್ಲ ಕಟ್ಟು ಹಾಕಿ ಅರ್ಥ ಬರುವುದೆಂದು

ಯಾಕೆ ಒಟ್ಟು ಯಾಕೆ ರೂಪ
ಯಾಕೆ ಕಟ್ಟು ಯಾಕೆ ಅರ್‍ಥ
ಇದ್ದುದನು ಇದ್ದ ಹಾಗೇ
ಬಿಟ್ಟು ಹೋದರದೂ ಚಂದ
ಬದುಕೇನು ದಸ್ತಾವೇಜೆ
ಆಯವ್ಯಯ ಶರಾ
ಬರೆದಿಡುವ ಪುಸ್ತಕವೆ

ಬದುಕು ಇದು ಯಾವುದಲ್ಲ
ರೂಪಕಕ್ಕೆ ಸಿಗುವುದಲ್ಲ
ಅಲ್ಲಿ ಹೊಲಿದರಿಲ್ಲಿ ತೆರೆವ
ಬಹುಶಃ ಒಂದು ಹಾಸಿಗೆ

ಮತ್ತು ಒಂದು ತಲೆದಿಂಬು
ಮತ್ತು ಒಂದು ಚದ್ದರ
ಎಲ್ಲಾ ಹೊದ್ದು ಮಲಗುವ
ಕನಸುಗಳನೂ ಕಾಣುವ
*****