ನನ್ನ ಹರಿದ ಅಂಗಿಯ ಮಧ್ಯದ
ತುಂಡು ಬಟ್ಟೆಯನ್ನೇ ತೆಗೆದು ಅವ್ವ
ಹೊಲಿದಳು ನನಗೊಂದು ನಮಾಜಿನ ಟೋಪಿ
ನನ್ನ ಬಣ್ಣಗೆಟ್ಟ ಟೊಪ್ಪಿಗೆ ನೋಡಿ
ಚಂದದ ಕಸೂತಿ ಹೆಣೆದ ಟೊಪ್ಪಿಗೆ
ಜಂಭದಿಂದ ಭಿಮ್ಮನೆ ಬೀಗುತ್ತ
ಅಹಮ್ಮಿನ ನೋಟ ಬೀರಿ
ನನ್ನವ್ವನ ಬಡತನವನು
ಅಣಕಿಸಿ ನಗುತ್ತಿದೆ ನೋಡು!
ಬೀಡಿ ಕಟ್ಟುವ ನನ್ನವ್ವನ
ನಾಜೂಕು ಎಸಳು ಬೆರಳುಗಳು
ಮೀನಾರಿನ ಅಜಾಹ್‌ನ ಕರೆಗೆ
ತಲೆಮೇಲೆ ಸೆರೆಗೆಳೆದು
ಹರಿದ ಬಟ್ಟೆಯನ್ನೇ ಹಾಸಿ
ನಮಾಜು ಮಡುತ್ತಿರುವುದ ಕಂಡು
ನೆರೆಯವಳ ಬಹುಮಹಡಿ ಬಂಗಲೆಯಿಂದ
ಮಖಮಲ್ಲಿನ ಜಾನಿಮಾಜು
ಧಿಮಾಕಿನಿಂದ ನಗುತ್ತಿದೆ ನೋಡು!
ಶ್ರಮಜೀವಿ ನನ್ನಪ್ಪ
ದಿನವೆಲ್ಲ ರಿಕ್ಷಾ ಹೊಡೆದು
ಗಳಿಸಿದ ಪುಡಿಗಾಸಿನ ಲೆಕ್ಕ
ದಣಿದ ನನ್ನವ್ವನ ಕೈಗಿಟ್ಟು
ದೈನ್ಯತೆಯ ನೋಟ ಬೀರಿ
ಕಣ್ಣೆತ್ತಿ ನೋಡಿದಾಗ
ಮಹಡಿ ಮನೆ ಸಾಹುಕಾರನ
ಕೆಂಪು ನೋಟಿನ ಕಟ್ಟುಗಳು
ನನ್ನವ್ವನ ಕೈಯಲ್ಲಿದ್ದ
ಪುಡಿಗಾಸು ನೋಡಿ
ಕಿಸಕ್ಕನೆ ನಗುತ್ತಿವೆ ನೋಡು!
ನನ್ನವ್ವನ ಹರಿದ ಸೀರೆಗೆ
ಜೋಡಿಸಿದ ನೂರೆಂಟು ತೇಪೆ
ದುಡಿದು ದುಡಿದು ಸವೆದ
ನನ್ನಪ್ಪನ ಅಂಗೈ ರೇಖೆ
ಸವೆದು ಶಿಥಿಲವಾದ ಪಂಚೆ
ಹರಿದ ಬನಿಯನ್ನುಗಳ ನೋಡಿ
ಸೂಟುಬೂಟು ಪಿತಾಂಬರ
ಕಟುಕಿಯಾಡಿ ನಗುವಾಗ ವ್ಯವಸ್ಥೆಯ ಎದೆಗೆ
ಝಾಡಿಸಿ ಒದ್ದು ಕೇಳಬೇಕೆನಿಸುತ್ತದೆ
ಹೇಳು ಎಲ್ಲಿ ಬಚ್ಚಿಟ್ಟಿರುವೆ
ನಿನ್ನ ಸಾಮಾಜಿಕ ನ್ಯಾಯ?
*****
ಅಜಾಹ್‌ನ – ನಮಾಜಿನ ಕರೆ
ಜಾನಿಮಾಜು – ನಮಾಜ್ ಮಾಡುವಾಗ ಕೆಳಗೆ ಹಾಸಿಕೊಳ್ಳುವ ಬಟ್ಟೆ