ಏನು ಇದು ಸಾರಥಿಯೆ, ನೀನಿಂತು ಮಾಡಿದರೆ
ನಾನು ಹಗೆಯರಸರನು ಕೂನಿಸುವನೆಂತು ?
೧
ದಾರಿ ಯಾವುದು ಈಗ ತೇರ ನಡೆಯಿಸುತಿಹುದು ?
ವೈರಿಗಳು ಪಾಳೆಯವ ಊರಿರುವುದೆಲ್ಲಿಯೊ !
ದಾರಿಯನು ಅರಿತವರು ಸಾರಿರುವ ಕುರುಹುಗಳು
ತೋರಲೊಲ್ಲವು ಕಣ್ಗೆ, ಗಾರಗೊಂಡಿದೆ ಮನವು-
ಏನು ಇದು ಸಾರಥಿಯೆ ?
೨
ಕಾಲಾಳುಗಳು ಹೋದ ಕಾಲುಗಳ ಹೊಳಹಿಲ್ಲ;
ಮೇಲಾಳುಗಳ ತೇರ ಗಾಲಿಗಳ ಗುರುತಿಲ್ಲ.
ಕೀಲಿಸಿರುವುದು ದಾರಿ ಮುಳ್ಳು-ಕಲ್ಲುಗಳಿಂದೆ
ಕಾಲಿಡಲು ಬಾರದಿದೆ ಹಳ್ಳ-ಹಿಗ್ಗುಗಳಿಂದೆ.
ಏನು ಇದು ಸಾರಥಿಯೆ ?
೩
ಕೊಳುಗುಳದ ದಾರಿಯನು ತಿಳಿದಿರುವನಿವನೊಡನೆ
ತಳರೆಂದು ತಿಳಿದವರು ತಿಳುಹಿದರೆ ನಾ ಬಂದೆ;
ತೊಳಲಿಸುತಲಿಹೆ ನೀನು, ಉಳಿದು ಸರಿದಾರಿಯನು !
ಗಳಿಲನೇ ರಣಕೆ ನಡೆ, ನಗೆಯೀಗ ಒಳಿತೇನು ?
ಏನು ಇದು ಸಾರಥಿಯೆ ?
೪
ಹಲವು ಬಂಟರ ತೇರುಗಳ ನಡೆಸಿ ಮುನ್ನ ನೀ
ಗೆಲವುಗಳನೆನಿತೆನಿತೊ ಗಳಿಸಿಕೊಟ್ಟಿಹೆಯೆಂತೆ-
ಚೆಲುವ ನೀನಿಂದೇತಕೊಲಿಯದಿಹೆಯೈ ನನಗೆ ?
ಗೆಲವನಾ ಗಳಿಸುವುದು ಮನಕೆ ಬಾರದೆ ನಿನಗೆ ?
ಏನು ಇದು ಸಾರಥಿಯೆ ?
೫
ಸಾರಥಿಯು ಸಮನಿರಲು ಆರಾತಿಗಳನರಿದು
ವೀರನವ ಗೆಲವನ್ನು ಸಾರುವುದು ಸಹಜವೈ !
ಹಾರಿ ಬೇಲಿಯ ಹೊಲದ ಸೇರಿ ಮೇಯುವ ತೆರದಿ
ಸಾರಥಿಯೆ ಕೈ ಮೀರೆ ಹೋರಿ ಗೆಲ್ಲಲು ದಾರಿ ?
ಏನು ಇದು ಸಾರಥಿಯೆ ?
*****